ಮಂಗಳೂರು: ದೇವದಾಸ್ ಕಾಪಿಕಾಡ್ ನಿರ್ಮಾಣದ “ಸೆಂಟ್ರಲ್ ಸಿನಿಮಾಸ್’ ಅರ್ಪಿಸುವ “ತೆಲಿಕೆದ ಬೊಳ್ಳಿ’ ತುಳು ಚಲನಚಿತ್ರದ ಮುಹೂರ್ತ ಬುಧವಾರ ವಾಮಂಜೂರಿನ ಬಂದಲೆಯಲ್ಲಿ ಜರಗಿತು. ಚಿತ್ರದ ಆರಂಭದ ದೃಶ್ಯಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಕ್ಯಾಮರಾ ಕ್ಲಾಪ್ ಮಾಡಿದರು, ಹಿರಿಯ ಯಕ್ಷಗಾನ ಕಲಾವಿದ ಮತ್ತು ಮಾಜಿ ಶಾಸಕ ಕುಂಬ್ಳೆ ಸುಂದರ್ ರಾವ್ ಕ್ಯಾಮರಾ ಚಾಲನೆ ಮಾಡಿದರು.
ದೇವದಾಸ್ ಕಾಪಿಕಾಡ್ ಅವರ ಪುತ್ರ ಅರ್ಜುನ ಕಾಪಿಕಾಡ್ ಚಿತ್ರದ ನಾಯಕನಾಗಿ ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಅವಕಾಶ ಪಡೆದಿದ್ದಾರೆ. ನಾಯಕಿಯರಾಗಿ ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಮೂಲತ: ಕರಾವಳಿಯವರಾದ ಆಶ್ರಿತಾ ಶೆಟ್ಟಿ ಮತ್ತು ವೈಶಾಲಿ ಶೆಟ್ಟಿ ಮೊದಲ ಬಾರಿಗೆ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಚಿತ್ರದ ಮುಖ್ಯ ಪಾತ್ರದಲ್ಲಿ ದೇವದಾಸ್ ಕಾಪಿಕಾಡ್ ನಟಿಸಲಿದ್ದಾರೆ. “ಪಂಚಮವೇದ’ ಕನ್ನಡ ಚಿತ್ರದ ನಿರ್ದೇಶಕ ಪಿ.ಎಚ್. ವಿಶ್ವನಾಥ್ ಈ ಚಿತ್ರಕ್ಕೆ ನಿರ್ದೇಶನ ನೀಡಲಿದ್ದು, ಆರ್. ಮಂಜುನಾಥ್ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಗುರುಕಿರಣ್ ಸಂಗೀತ ನೀಡಲಿದ್ದಾರೆ, ಸುಧೀರ್ ಕಾಮತ್ ಮತ್ತು ಶರ್ಮಿಳಾ ದೇವದಾಸ್ ಕಾಪಿಕಾಡ್ ಚಿತ್ರದ ನಿರ್ಮಾಪಕರಾಗಿದ್ದಾರೆ.
ಚಿತ್ರದ ಮುಖ್ಯ ತಾರಾಗಣದಲ್ಲಿ ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಡಿ.ಎಸ್. ಬೋಳಾರ್, ಲಕ್ಷ್ಮಣ ಕುಮಾರ್ ಮಲ್ಲೂರು, ರಮಾ ಬಿ.ಸಿ.ರೋಡ್, ಗೋಪಿನಾಥ್ ಭಟ್, ಸಾಯಿಕೃಷ್ಣ, ದಿನೇಶ್ ಅತ್ತಾವರ ಸೇರಿದಂತೆ ಹಲವು ಖ್ಯಾತ ಕಲಾವಿದರು ಅಭಿನಯಿಸಲಿದ್ದಾರೆ. ಒಂದು ತಿಂಗಳ ಕಾಲ ಬಂದಲೆ, ಸಿದ್ದಕಟ್ಟೆ ಪರಿಸರದಲ್ಲಿ ಚಿತ್ರೀಕರಣ ನಡೆಯಲಿದೆ.
Click this button or press Ctrl+G to toggle between Kannada and English