ಮಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರನ್ನು ಗಡಿಪಾರು ಮಾಡಬೇಕೆಂದು ಆಡಿಯೋ ಸಂದೇಶ ಕಳುಹಿಸಿದ್ದ ವ್ಯಕ್ತಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಮಾಜಿ ಶಾಸಕರುಗಳ ನೇತೃತ್ವದಲ್ಲಿ ಪೊಲೀಸ್ ಕಮಿಷನರ್ಗೆ ಮನವಿ ಸಲ್ಲಿಸಲಾಯಿತು.
ಪೂಜಾರಿ ಅವರು ರಾಮಮಂದಿರ ನಿರ್ಮಾಣ ಕುರಿತಂತೆ ನೀಡಿರುವ ಹೇಳಿಕೆಯನ್ನು ವಿರೋಧಿಸಿ ವ್ಯಕ್ತಿವೋರ್ವ ಅವರನ್ನು ಎನ್ಕೌಂಟರ್ ಮಾಡಬೇಕು, ಗಡಿಪಾರು ಮಾಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಸಂದೇಶ ಕಳುಹಿಸಿದ್ದ.
ಮಾಜಿ ಶಾಸಕರಾದ ಜೆ ಆರ್ ಲೋಬೋ, ವಿಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ನ ನಾಯಕರು ಮತ್ತು ಕಾರ್ಯಕರ್ತರು ಪೊಲೀಸ್ ಕಮಿಷನರ್ ಅವರನ್ನು ಭೇಟಿ ಮಾಡಿ ಜನಾರ್ದನ ಪೂಜಾರಿ ವಿರುದ್ಧ ನೀಡಿರುವ ಹೇಳಿಕೆ ನಮಗೆ ಆಘಾತ ತಂದಿದೆ. ಪೂಜಾರಿ ಅವರು ದೇಶದ ಹಿರಿಯ ನಾಯಕ . ಅವರನ್ನು ಗಡಿಪಾರು ಮಾಡಬೇಕು ಎನ್ಕೌಂಟರ್ ಮಾಡಬೇಕು ಎಂದು ಹೇಳಿರುವುದು ಸರಿಯಲ್ಲ. ಆ ರೀತಿ ಆಡಿಯೋ ಸಂದೇಶ ಕಳುಹಿಸಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಂಗಳೂರು ಪೊಲೀಸ್ ಕಮಿಷನರ್ ಟಿ ಆರ್ ಸುರೇಶ್ ಕುಮಾರ್, ಈಗಾಗಲೇ ಈ ಬಗ್ಗೆ ಬಂದಿರುವ ಮನವಿಯನ್ನು ಆಧರಿಸಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೀಘ್ರ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ರು.
Click this button or press Ctrl+G to toggle between Kannada and English