ಮೈಸೂರು: ಮೈಸೂರು ನಗರವನ್ನು ವಾಸ್ತುಪ್ರಕಾರ ನಿರ್ಮಾಣ ಮಾಡಬೇಕೆಂದು ಆಧ್ಯಾತ್ಮ ಗುರು ರವಿಶಂಕರ್ ಗುರೂಜಿ ಅವರು ಸಲಹೆ ನೀಡಿದ್ದಾರೆ.
ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಗುರುವಾರ ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟ (ಕ್ರೆಡಾಯ್) ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಶ್ರೀಗಳು, ಸಣ್ಣ ಮತ್ತು ಮಧ್ಯಮ ನಗರಗಳಲ್ಲಿ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಿ ಸ್ವಚ್ಛವಾದ ಗಾಳಿ, ಶುದ್ಧ ನೀರು ಜೊತೆಗೆ ವಾಸ್ತು ಪ್ರಕಾರ ನಗರ ನಿರ್ಮಾಣ ಮಾಡಬೇಕೆಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರಿಗೆ ಸಲಹೆ ನೀಡಿದರು.
ಇದೇ ವೇಳೆ ಮಾತನಾಡಿದ ಖಾದರ್ ಅವರು, ಕಟ್ಟಡಗಳ ನಕ್ಷೆ ಬಡಾವಣೆ ನಕ್ಷೆಗಳನ್ನ ಒಪ್ಪಿಗೆ ಪಡೆಯುವ ವಿಷಯದಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಲು ಶೀಘ್ರದಲ್ಲೇ ಆನ್ಲೈನ್ನಲ್ಲೆ ಅರ್ಜಿ ಸಲ್ಲಿಸುವ ಏಕಗವಾಕ್ಷಿ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದೆಂದು ತಿಳಿಸಿದರು.
ಈ ವ್ಯವಸ್ಥೆಯಲ್ಲಿ ಆನ್ಲೈನ್ನಲ್ಲೆ ಅರ್ಜಿ ಸಲ್ಲಿಸಲು ಕಡ್ಡಾಯಗೊಳಿಸುವ ಚಿಂತನೆ ನಡೆಸಿದ್ದು, ಇದರಿಂದ ಬ್ರೋಕರ್ ಗಳ ಹಾವಳಿಯನ್ನ ತಪ್ಪಿಸಬಹುದು ಎಂದರು.
ನೋಟ್ಬ್ಯಾನ್ನಿಂದ ರಿಯಲ್ ಎಸ್ಟೇಟ್‌ಗೆ ಪೆಟ್ಟು ಬಿದ್ದಿದ್ದು, ನೋಟು ರದ್ದತಿ, ಜಿಎಸ್‌ಟಿ , ರೇರಾ ಕಾಯ್ದೆಯಿಂದ ರಿಯಲ್ ಎಸ್ಟೇಟ್ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಹಣದ ಹರಿವು ತಗ್ಗಿದೆ ಎಂದು ಕ್ರೆಡಾಯ್ ರಾಷ್ಟ್ರೀಯ ಮುಖ್ಯಸ್ಥ ಗೀತಾಂಬರ್ ಆನಂದ್ ಆತಂಕ ವ್ಯಕ್ತ ಪಡಿಸಿದರು.
ರಿಯಲ್ ಎಸ್ಟೇಟ್ ಮೇಲಿರುವ ಶೇ 12ರಷ್ಟು ಜಿಎಸ್‌ಟಿಯನ್ನು ಶೇ 8ಕ್ಕೆ ಇಳಿಸಬೇಕು. ಪರವಾನಗಿ ಹಾಗೂ ಇತರ ಒಪ್ಪಿಗೆ ಪಡೆಯಲು ಎಲ್ಲಾ ರಾಜ್ಯಗಳಲ್ಲಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಬೇಕು. ಅನಧಿಕೃತ ಕಟ್ಟಡ ನಿರ್ಮಾಣದಾರರಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
Click this button or press Ctrl+G to toggle between Kannada and English