ಮೇಯರ್‌ ಗುಲ್ಜಾರ್‌ಬಾನು ಅವರಿಂದ ಮಂಗಳೂರು ಪಾಲಿಕೆಯ ಬಜೆಟ್ ಮಂಡನೆ

11:46 AM, Saturday, March 31st, 2012
Share
1 Star2 Stars3 Stars4 Stars5 Stars
(4 rating, 3 votes)
Loading...

MCC Budjet

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್‌ ಗುಲ್ಜಾರ್‌ಬಾನು ಅವರು 2012-13 ರ ಸಾಲಿನ 228.39 ಕೋ.ರೂ. ಮೊತ್ತದ ಬಜೆಟ್‌ ಶುಕ್ರವಾರ ಮಂಡಿಸಿದರು. ಬಹುಮತ ವಿರುವ ಬಿಜೆಪಿ ಮತ್ತು ಬಹುಮತ ವಿಲ್ಲದ ಕಾಂಗ್ರೆಸ್ಸ್ ನಡುವೆ ವಾದ ವಾಗ್ವದಗಳು ನಡೆದು ಬಜೆಟ್ ಮಂಡನೆಯಾಯಿತು.

ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಪಾಲಿಕೆಯ ಬಜೆಟ್‌ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸದನಕ್ಕೆ ಹಾಜರಾದರು. ಬಿಜೆಪಿ ಸದಸ್ಯೆ ಶಾಂತಾ ಅವರಿಗೆ ಬಜೆಟ್‌ ಮಂಡಿಸುವಂತೆ ಮೇಯರ್‌ ಸೂಚಿಸಿದರು. ಶಾಂತಾ ಅವರು ಬಜೆಟ್‌ ಓದಲು ಆರಂಭಿಸುತ್ತಿದ್ದಂತೆ ಶಂಕರ ಭಟ್‌ ಅವರು ಪಾಲಿಕೆಯಲ್ಲಿ ಸಾಂವಿಧಾನಿಕ ಬಿಕ್ಕಟ್ಟಿನ ಪರಿಸ್ಥಿತಿ ಇದೆ. ಈಗ ಮೇಯರ್‌ ಪದವಿಯಲ್ಲಿರುವವರು ಸದನದಲ್ಲಿ ಬಹುಮತ ಇಲ್ಲದ ಪಕ್ಷದ ಸದಸ್ಯರು. ಅವರ ಆಯ್ಕೆ ಕ್ರಮಬದ್ಧವಾಗಿ ನಡೆದಿಲ್ಲ. ಸ್ಥಾಯೀ ಸಮಿತಿ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಅದುದರಿಂದ ಬಜೆಟ್‌ ಅಧಿವೇಶನ ನಡೆಸಲು ಮೇಯರ್‌ ಅವರಿಗೆ ಅಧಿಕಾರ ಇಲ್ಲ ಎಂದು ವಾದಿಸಿದರು.

ಇದನ್ನು ಆಕ್ಷೇಪಿಸಿದ ಕಾಂಗ್ರೆಸ್‌ ಹಾಗೂ ಪಕ್ಷೇತರರ ಹಾಗೂ ಜೆಡಿಎಸ್‌ ಮತ್ತು ಸಿಪಿಎಂ ಸದಸ್ಯರು ಬಜೆಟ್‌ ಮಂಡಿಸುವಂತೆ ಆಗ್ರಹಿಸಿದರು. ಮೇಯರ್‌ ಅವರು ಶಾಂತಾ ಅವರಿಗೆ ಬಜೆಟ್‌ ಓದುವಂತೆ ಮಗದೊಮ್ಮೆ ಸೂಚಿಸಿದರು. ಈ ನಡುವೆ ಬಿಜೆಪಿ ಹಾಗೂ ಕಾಂಗ್ರೆಸ್‌ ಸದಸ್ಯರ ನಡುವೆ ಆರೋಷ, ಪ್ರತ್ಯಾರೋಪಗಳು ತಾರಕ್ಕೇರಿ ಸದನದಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣಗೊಂಡಿತು.

MCC Budjet

ಜೆಡಿಎಸ್‌ ಸದಸ್ಯ ಅಜೀಜ್‌ ಕುದ್ರೋಳಿ ಅವರು ಬಿಜೆಪಿಯ ಕೆಲವು ಸದಸ್ಯರು ತನ್ನನ್ನು ಸದನದಿಂದ ಹೊರಗೆ ಹೋಗಲು ಹೇಳಿ ಅವಮಾನಿಸಿದ್ದಾರೆ ಎಂದು ಹೇಳಿ ಮೇಯರ್‌ ಪೀಠದ ಮುಂದೆ ಧರಣಿ ಕುಳಿತರು. ಕೆಲ ಸದಸ್ಯರು ಅವರನ್ನು ಸಮಾಧಾನಿಸಿ ಧರಣಿ ಕೈಬಿಟ್ಟು ಆಸನದೆಡೆಗೆ ತೆರಳುವಂತೆ ಮನವೊಲಿಸಿದರು.

ಮೇಯರ್‌ ಅವರು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು. ಮತ್ತೆ ಸದನ ಸಮಾವೇಶಗೊಂಡಾಗ ಇದೇ ಪರಿಸ್ಥಿತಿ ಮರುಕಳಿಸಿತು. ಪರಸ್ಪರ ವಾಗ್ವಾದ ಮುಂದುವರಿಯಿತು. ಬಿಜೆಪಿ ಸದಸ್ಯರು ಬಜೆಟ್‌ ಮಂಡನೆಗೆ ಮೇಯರ್‌ ಅವರಿಗೆ ಅಧಿಕಾರವಿಲ್ಲ. ಲೇಖಾನುದಾನಕ್ಕೆ ಕೋರಿಕೆ ಮಂಡಿಸಬೇಕು ಎಂದು ಪಟ್ಟು ಹಿಡಿದರು. ಕಾಂಗ್ರೆಸ್‌ ಸದಸ್ಯರ ಕಡೆಯಿಂದ ಬಿಜೆಪಿಗೆ ಧಿಕ್ಕಾರ ಘೋಷಣೆಗಳು ಮೊಳಗಿದವು.

ಸದನದಲ್ಲಿ ಬಹುಮತವಿಲ್ಲದೆ ಇರುವುದರಿಂದ, ನೀವು ಚುನಾಯಿತರಾಗಿರುವ ಬಗ್ಗೆ ಪ್ರಕರಣವು ನ್ಯಾಯಾಲಯಗಳಲ್ಲಿ ತೀರ್ಮಾನಕ್ಕೆ ಬಾಕಿ ಇರುವುದರಿಂದ, ತಾವು ಸದನವನ್ನು ನಿಭಾಯಿಸಬಾರದು, ಬಜೆಟ್‌ ಸಭೆಯನ್ನು ಕರೆದಿರುವುದರಿಂದ ಸಭೆಯ ಕಲಾಪವನ್ನು ಸದನದಲ್ಲಿ ಬಹುಮತವುಳ್ಳ ನಾವು ಆಕ್ಷೇಪಿಸುತ್ತೇವೆ. ಇದನ್ನು ಪರಿಗಣಿಸಿ ತಾವು ಕಲಾಪಗಳನ್ನು ಮುಂದೂಡಬೇಕು ಎಂದು ವಿನಂತಿ ಎಂಬ ಒಕ್ಕಣೆಗಳುಳ್ಳ ಆಕ್ಷೇಪ ಪತ್ರವನ್ನು ಬಿಜೆಪಿ ಸದಸ್ಯರು ಸಲ್ಲಿಸಿದರು. ಅಂದಾಜು ಮುಂಗಡಪತ್ರ ಪರಿಶೀಲಿಸಿ ಪರಿಷ್ಕರಿಸುವಂತೆ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯೀ ಸಮಿತಿಗೆ ಶಿಫಾರಸು ಮಾಡುವಂತೆ ಇನ್ನೊಂದು ಕೋರಿಕೆ ಪತ್ರವನ್ನು ಪರಿಷತ್‌ ಕಾರ್ಯದರ್ಶಿ ಅವರಿಗೆ ಸಲ್ಲಿಸಿದರು. ಬಳಿಕ ಅಧಿವೇಶವನ್ನು ಬಹಿಷ್ಕರಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು. ಅವರ ಜತೆ ಉಪಮೇಯರ್‌ ಅಮಿತಕಲಾ ಅವರು ಹೊರ ನಡೆದರು.

MCC Budjet

ಸದನದಲ್ಲಿ ಗೊಂದಲದ ಪರಿಸ್ಥಿತಿ ಇರುವುದರಿಂದ ಮತ್ತು ಬಜೆಟ್‌ ಮಂಡನೆ ಮಾಡಬಾರದು ಎಂಬುದಾಗಿ ನನ್ನ ಪಕ್ಷದ ಸದಸ್ಯರ ಅಭಿಪ್ರಾಯವನ್ನು ಪರಿಗಣಿಸಿ ಮುಂಗಡಪತ್ರವನ್ನು ಓದುವುದಿಲ್ಲ ಎಂದು ಶಾಂತಾ ಅವರು ಹೇಳಿ ಸದಸ್ಯರ ಜತೆಗೆ ಸಭಾತ್ಯಾಗದಲ್ಲಿ ಪಾಲ್ಗೊಂಡರು. ಆ ಬಳಿಕ ಮೇಯರ್‌ ಅವರು ಆಯವ್ಯಯ ಪತ್ರವನ್ನು ಓದಿದರು.

ಮೇಯರ್‌ ಅವರು ಮುಂಗಡಪತ್ರವನ್ನು ಮಂಡಿಸಿದ ಬಳಿಕ ಪಕ್ಷೇತರ ಸದಸ್ಯೆ ಮರಿಯಮ್ಮ ಥೋಮಸ್‌ ಅವರು ಚರ್ಚೆಗೆ ಚಾಲನೆ ನೀಡಿದರು. ಪಕ್ಷೇತರ ಸದಸ್ಯ ಹರೀಶ್‌, ಸಿಪಿಎಂ ಸದಸ್ಯೆ ಜಯಂತಿ ಶೆಟ್ಟಿ,, ಜೆಡಿಎಸ್‌ ಸದಸ್ಯ ಅಜೀಜ್‌ ಕುದ್ರೋಳಿ, ಕಾಂಗ್ರೆಸ್‌ ಪಕ್ಷದ ಸದಸ್ಯರಾದ ದೀಪಕ್‌, ನವೀನ್‌ ಡಿ’ಸೋಜಾ, ಹರಿನಾಥ್‌, ಅಪ್ಪಿ, ಶಶಿಧರ ಹೆಗ್ಡೆ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿ ಅಭಿಪ್ರಾಯ ಮಂಡಿಸಿದರು. ಮರಿಯಮ್ಮ ಥೋಮಸ್‌ ಅವರ ಮಂಡಿಸಿದ ಕುಟೀರ ಭಾಗ್ಯದ ನೆರವು ಅನ್ನು 25,000 ರೂ.ಗೇರಿಸಬೇಕು ಹಾಗೂ ಬಿಪಿಎಲ್‌ ಕುಟುಂಬಗಳಿಗೆ ಸಿಂಟೆಕ್ಸ್‌ ಟ್ಯಾಂಕ್‌ಗಳನ್ನು ನೀಡಬೇಕು ಎಂಬ ಅಂಶಗಳ ತಿದ್ದುಪಡಿಯ ಜತೆಗೆ ಹಾಜರಿದ್ದ ಸದಸ್ಯರು ಮುಂಗಡಪತ್ರವನ್ನು ಸರ್ವಾನುತದಿಂದ ಅನುಮೋದಿಸಿದರು.

ಇದು ಬಿಜೆಪಿ ಬಜೆಟ್‌. ಬಿಜೆಪಿಯವರೇ ಇದನ್ನು ಸಿದ್ಧಪಡಿಸಿದ್ದು. ನಗರದ ಹಿತದೃಷ್ಟಿಯಿಂದ ಇದನ್ನು ನಾವು ಒಪ್ಪಿಕೊಂಡು ಮಂಡಿಸಿದ್ದೇವೆ. ಅವರು ಚರ್ಚೆಯಲ್ಲಿ ಭಾಗವಹಿಸುವ ಬದಲು ಸಭಾತ್ಯಾಗ ಮಾಡಿದ್ದು ಬೇಸರ ತಂದಿದೆ ಎಂದು ಹರಿನಾಥ್‌ ಹೇಳಿದರು. ಈ ಬಜೆಟ್‌ ಬಿಜೆಪಿಯ ಮಗು. ಇದನ್ನು ನೀವು ಸಾಕುತ್ತಿರಿ ಎಂದು ಮರಿಯಮ್ಮ ಥೋಮಸ್‌ ಚುಚ್ಚಿದರು.

ಮಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲೇ ಬಹುಮತವಿರುವ ಪಕ್ಷ ಬಜೆಟ್‌ ಮಂಡನೆಯಿಂದ ಅವಕಾಶವನ್ನು ಕಳೆದುಕೊಂಡಿರುವುದು, ಮೇಯರ್‌ ಅವರು ಬಜೆಟ್‌ ಮಂಡಿಸುವುದು, ಬಹುಮತವಿರುವ ಪಕ್ಷ ಬಜೆಟ್‌ ಅಧಿವೇಶನವನ್ನು ಬಹಿಷ್ಕರಿಸಿ ಸಭಾತ್ಯಾಗ ಮಾಡಿರುವುದು, ಬಹುಪಾಲು ಸದಸ್ಯರಿಲ್ಲದೆ ಬಜೆಟ್‌ ಅನುಮೋದನೆಗೊಳ್ಳುತ್ತಿರುವಂತಹ ಪರಿಸ್ಥಿತಿಗಳು ಪ್ರಥಮವಾಗಿದೆ.

ಸದನದಲ್ಲಿ ಬಜೆಟ್‌ಗೆ ನಾವು ಅಕ್ಷೇಪನೆಗಳನ್ನು ಸಲ್ಲಿಸಿ ನಮ್ಮ ವಿರೋಧವನ್ನು ದಾಖಲಿಸಿದ್ದೇವೆ. ಮಹಾನಗರ ಪಾಲಿಕೆ ಕಾಯ್ದೆಯ ಪ್ರಕಾರ ಸ್ಥಾಯಿ ಸಮಿತಿ ಅಧ್ಯಕ್ಷರೇ ಬಜೆಟ್‌ ಮಂಡಿಸಬೇಕು. ಮೇಯರ್‌ ಅವರಿಗೆ ಈ ಅಧಿಕಾರ ಇಲ್ಲ. ಅದುದರಿಂದ ಬಜೆಟ್‌ಗೆ ಬಹುಮತದ ವಿರೋಧ ದಾಖಲಾಗಿದ್ದು ಇದು ಸಿಂಧುವಲ್ಲ ಎಂಬುದು ಬಿಜೆಪಿ ಸದಸ್ಯರ ವಾದ.

ಸದನದಲ್ಲಿ 25 ಸದಸ್ಯರಿದ್ದು ಕೋರಂ ಇತ್ತು. ಬಜೆಟ್‌ ಸರ್ವಾನುಮತದಿಂದ ಅಂಗೀಕಾರಗೊಂಡಿದೆ. ಬಜೆಟ್‌ನ್ನು ಮತಕ್ಕೆ ಹಾಕಲು ಅವಕಾಶವಿಲ್ಲ. ಮುಂದಿನ ಅಧಿವೇಶನದಲ್ಲಿ ಬಜೆಟ್‌ ಮಂಡನೆ ಕಾರ್ಯಸೂಚಿಯಲ್ಲಿ ಇರುವುದಿಲ್ಲ. ತಿದ್ದುಪಡಿಗಳು ಮಾತ್ರ ದೃಢೀಕರಣಕ್ಕೆ ಬರುತ್ತದೆ. ಆದುದರಿಂದ ಬಜೆಟ್‌ ಅಂಗೀಕಾರಗೊಂಡಿದೆ ಎಂದು ಕಾಂಗ್ರೆಸ್‌ ಪಕ್ಷದ ವಾದ.

ಇಂತಹ ಪರಿಸ್ಥಿತಿ ಪ್ರಥಮ ಬಾರಿಗೆ ನಿರ್ಮಾಣಗೊಂಡಿದೆ. ಆದರೆ ಬಜೆಟ್‌ಗೆ ಸದನದಲ್ಲಿ ಹಾಜರಿದ್ದ ಸದಸ್ಯರು ಸರ್ವಾನುಮತದ ಅಂಗೀಕಾರ ನೀಡಿದ್ದು ಇದನ್ನು ಸರಕಾರಕ್ಕೆ ಕಳುಹಿಸಲಾಗುವುದು. ಎರಡು ತಿಂಗಳೊಳಗೆ ಸರಕಾರದಿಂದ ಅನುಮೋದನೆ ದೊರೆಯದಿದ್ದರೆ ಇದು ಅಂಗೀಕಾರಗೊಂಡಿದೆ ಎಂದು ಪರಿಗಣಿಸಲಾಗುತ್ತದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English