ಉಡುಪಿ: ವಿಧಾನಪರಿಷತ್ ಹಿರಿಯ ಸದಸ್ಯರಾದ ಕಾಂಗ್ರೆಸ್ ನ ಪ್ರತಾಪ್‍ಚಂದ್ರ ಶೆಟ್ಟಿ ಮೇಲ್ಮನೆ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ 12ಕ್ಕೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಸಚಿವ ಜಮೀರ್ ಅಹಮ್ಮದ್ ಖಾನ್, ಮೇಲ್ಮನೆ ಸದಸ್ಯರಾದ ರವಿ, ಐವಾನ್ ಡಿಸೋಜಾ ಇನ್ನಿತರರೊಡನೆ ಆಗಮಿಸಿದ .ಪ್ರತಾಪ್‍ಚಂದ್ರ ಶೆಟ್ಟಿ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಪ್ರತಾಪ್‍ಚಂದ್ರ ಶೆಟ್ಟಿ ಹೊರತಾಗಿ ಇನ್ನಾರೂ ಸಭಾಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆಯಲ್ಲಿ ಅವರು ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಅಧಿಕಾರಾವಧಿ 2022ರವರೆಗೆ ವಿಸ್ತರಿಸಲಿದೆ.
ಕಡೇ ಕ್ಷಣದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಿಂದ ಪ್ರತಾಪ್‍ಚಂದ್ರ ಶೆಟ್ಟಿ ಸಭಾಪತಿಯಾಗಿ ಸ್ಥಾನಕ್ಕೇರಿದ್ದಾರೆ. ಇದಕ್ಕೆ ಮುನ್ನ ಮೈತ್ರಿ ಸರ್ಕಾರದ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಅಥವಾ ಎಸ್.ಆರ್.ಪಾಟೀಲ್ ಸಭಾಪತಿಯಾಗಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು.
ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಹೊಂದಿದ್ದು ಒಂದೊಮ್ಮೆ ಚುನಾವಣೆ ನಡೆದಿದ್ದರೆ ಸಭಾಪತಿ, ಉಪಸಭಾಪತಿ, ಸಚೇತಕ ಸೇರಿ ಎಲ್ಲಾ ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸುತ್ತಿತ್ತು. ಇದೀಗ ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವ ಕಾರಣ ಸಭಾಪತಿ ಸ್ಥಾನ ಮಾತ್ರ ತಮ್ಮಲ್ಲಿ ಉಳಿಸಿಕೊಂಡು ಉಳಿದ ಸ್ಥಾನಗಳನ್ನು ಜೆಡಿಎಸ್ ನೊಡನೆ ಹಂಚಿಕೊಳ್ಳಲು ಕೈ ಪಾಳಯ ನಿರ್ಧರಿಸಿದೆ ಎನ್ನಲಾಗಿದೆ.
ದಕ್ಷಿಣ ಕನ್ನಡ ಮೂಲದವರಾದ ಪ್ರತಾಪ್‍ಚಂದ್ರ ಶೆಟ್ಟಿ ನಾಲ್ಕು ಬಾರಿ ಶಾಸಕನಾಗಿ, ಮೂರು ಬಾರಿ ವಿಧಾನಪರಿಷತ್ ಸದಸ್ಯನಾಗಿ ಆಯ್ಜೆಗೊಂಡಿದ್ದು ಕ್ರಿಯಾಶೀಲ ರಾಜಕಾರಣಿ ಎಂದು ಹೆಸರಾಗಿದ್ದಾರೆ.
Click this button or press Ctrl+G to toggle between Kannada and English