ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕಾಮೆಡ್- ಕೆ, ಖಾಸಗಿ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಶಿಕ್ಷಣ ಕೋರ್ಸ್‌ಗಳ ಶುಲ್ಕವನ್ನು ಶೇ 10ರಷ್ಟು ಹೆಚ್ಚಿಸಲು ಹಾಗೂ ಕಳೆದ ಸಾಲಿನ ಸೀಟು ಹಂಚಿಕೆ ಪ್ರಮಾಣವನ್ನೇ 2012-13ನೇ ಸಾಲಿಗೂ ಮುಂದುವರಿಸಲು ತೀರ್ಮಾನಿಸಲಾಗಿದೆ.
ಶುಲ್ಕ ಹೆಚ್ಚಳ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್, ವಾಸ್ತುಶಿಲ್ಪ ಸೇರಿದಂತೆ ಎಲ್ಲ ಕೋರ್ಸ್‌ಗಳಿಗೂ ಅನ್ವಯವಾಗಲಿದೆ. ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಸದ್ಯದಲ್ಲೇ ಸರ್ಕಾರ ಮತ್ತು ಕಾಮೆಡ್- ಕೆ ನಡುವೆ ಪರಸ್ಪರ ಒಪ್ಪಂದ ಏರ್ಪಡಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ತಿಳಿಸಿದ್ದಾರೆ. ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ ಕೋರ್ಸ್‌ಗಳಲ್ಲಿ ಶೇ 33ರಷ್ಟು ಸೀಟುಗಳು ಸರ್ಕಾರಕ್ಕೆ ಲಭ್ಯವಾಗಲಿವೆ. ಉಳಿದ ಶೇ 67ರಷ್ಟು ಸೀಟುಗಳು ಕಾಮೆಡ್- ಕೆ, ಆಡಳಿತ ಮಂಡಳಿ ಕೋಟಾ ಮೂಲಕ ಭರ್ತಿಯಾಗಲಿವೆ.
ಎಂಬಿಬಿಎಸ್‌ನಲ್ಲಿ ಶೇ 40ರಷ್ಟು ಸರ್ಕಾರಿ ಕೋಟಾ ಹಾಗೂ ಶೇ 60ರಷ್ಟು ಸೀಟುಗಳು ಕಾಮೆಡ್- ಕೆ ಮತ್ತು ಆಡಳಿತ ಮಂಡಳಿ ಕೋಟಾ ಮೂಲಕ ಹಂಚಿಕೆ ಮಾಡಲಾಗುತ್ತದೆ. ಎಂಜಿನಿಯರಿಂಗ್‌ನಲ್ಲೂ ಶೇ 40ರಷ್ಟು ಸೀಟುಗಳು ಸರ್ಕಾರಿ ಮತ್ತು ಶೇ 60ರಷ್ಟು ಸೀಟುಗಳು ಕಾಮೆಡ್-ಕೆ ಮತ್ತು ಆಡಳಿತ ಮಂಡಳಿ ಕೋಟಾ ಮೂಲಕ ಹಂಚಿಕೆಯಾಗಲಿವೆ.
ಕಳೆದ ವರ್ಷ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಎರಡು ರೀತಿಯ ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಆಡಳಿತ ಮಂಡಳಿ ಕೋಟಾ ಸೀಟುಗಳಿಗೆ ಒಂದು ಲಕ್ಷ ರೂಪಾಯಿ ಶುಲ್ಕ ಪಡೆಯುವ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳಿಗೆ 35 ಸಾವಿರ ರೂಪಾಯಿ ಇತ್ತು. ಈ ಬಾರಿ ಶೇ 10ರಷ್ಟು ಹೆಚ್ಚಳ ಮಾಡುವುದರಿಂದ ಸರ್ಕಾರಿ ಕೋಟಾ ಸೀಟುಗಳ ಶುಲ್ಕದಲ್ಲಿ 3,500 ರೂಪಾಯಿ ಹೆಚ್ಚಳವಾಗಲಿದೆ.
ಆಡಳಿತ ಮಂಡಳಿ ಕೋಟಾ ಸೀಟಿಗೆ 1.25 ಲಕ್ಷ ರೂಪಾಯಿ ತೆಗೆದುಕೊಳ್ಳುವ ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟಿಗೆ 30 ಸಾವಿರ ರೂಪಾಯಿ ಶುಲ್ಕವಿತ್ತು. ಶೇ 10ರಷ್ಟು ಹೆಚ್ಚಳವಾದರೆ ಮೂರು ಸಾವಿರ ರೂಪಾಯಿ ಹೆಚ್ಚಳವಾಗಲಿದೆ. ಆಡಳಿತ ಮಂಡಳಿ ಕೋಟಾ ಸೀಟುಗಳಿಗೆ 12,500 ರೂಪಾಯಿ ಹೆಚ್ಚಳವಾಗಲಿದೆ.
ಆಡಳಿತ ಮಂಡಳಿಗಳು ಶೇ 30ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದವು. ಆದರೆ ಇದು ಚುನಾವಣಾ ವರ್ಷವಾಗಿರುವುದರಿಂದ 30ರಷ್ಟು ಹೆಚ್ಚಳ ಮಾಡುವುದು ಸಾಧ್ಯವಿಲ್ಲ. ಶೇ 10ರಷ್ಟು ಹೆಚ್ಚಳ ಮಾಡಲು ಸರ್ಕಾರ ಸಿದ್ಧವಿದೆ. ಇದಕ್ಕೆ ಒಪ್ಪಿಕೊಳ್ಳಬೇಕು ಎಂದು ಸದಾನಂದಗೌಡ ಮಾಡಿದ ಮನವಿಗೆ ಆಡಳಿತ ಮಂಡಳಿ ಪದಾಧಿಕಾರಿಗಳು ಒಲ್ಲದ ಮನಸ್ಸಿನಿಂದಲೇ ಸಮ್ಮತಿ ಸೂಚಿಸಿದರು ಎಂದು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ.ಕೆ.ಪಾಂಡುರಂಗಶೆಟ್ಟಿ ವಿವರಿಸಿದರು.
ಎಂಜಿನಿಯರಿಂಗ್ ಕೋರ್ಸ್‌ಗಳಲ್ಲಿ ಶೇ 5ರಷ್ಟು ಸೂಪರ್ ನ್ಯೂಮರರಿ ಕೋಟಾ ಸೀಟುಗಳನ್ನು ಈ ವರ್ಷವೂ ಉಚಿತವಾಗಿ ಹಂಚಿಕೆ ಮಾಡಲಾಗುತ್ತದೆ. ಪೋಷಕರ ವಾರ್ಷಿಕ ಆದಾಯ 3.5 ಲಕ್ಷಕ್ಕಿಂತ ಕಡಿಮೆ ಆದಾಯವುಳ್ಳವರ ಮಕ್ಕಳು ಈ ಸೀಟುಗಳನ್ನು ಪಡೆಯಲು ಅರ್ಹರು. ಈ ಬಗ್ಗೆ ವಿವರವಾದ ಮಾಹಿತಿಯನ್ನು ಕೈಪಿಡಿಯಲ್ಲಿ ಪ್ರಕಟಿಸಲಾಗುತ್ತದೆ.
ಈ ವರ್ಷದ ಸಿಇಟಿ ಪರೀಕ್ಷೆಗೆ ಸುಮಾರು 1.5 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದು, ಪ್ರವೇಶ ಪರೀಕ್ಷೆ ಅರ್ಜಿ ಮತ್ತು ಕೈಪಿಡಿಗಾಗಿ ಡಿ.ಡಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಅರ್ಜಿಗಳನ್ನು ಕಳುಹಿಸಿಕೊಡುವ ಪ್ರಕ್ರಿಯೆ ಆರಂಭವಾಗಿದೆ.
ಏಪ್ರಿಲ್ ಮೊದಲ ವಾರದ ಒಳಗಾಗಿ ಎಲ್ಲರಿಗೂ ಅರ್ಜಿಗಳು ಲಭ್ಯವಾಗಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.
Click this button or press Ctrl+G to toggle between Kannada and English