ವಿದ್ಯುತ್ತಿಲ್ಲದೆ ತೋಟಕ್ಕೆ ಹರಿಯುತ್ತಿದೆ ನೀರು!

11:39 AM, Thursday, December 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

nelyadiಉಪ್ಪಿನಂಗಡಿ: ಹರಿಯುವ ನೀರಿನ ಶಕ್ತಿಯನ್ನೇ ಬಳಸಿಕೊಂಡ ರೈತರೊಬ್ಬರು ತಮ್ಮ ತೋಟವನ್ನು ವಿದ್ಯುತ್ಛಕ್ತಿಯ ಸಹಾಯವೇ ಇಲ್ಲದೆ ನೀರಾವರಿ ವ್ಯವಸ್ಥೆಗೆ ಒಳಪಡಿಸಿದ್ದಾರೆ. ಬೆಳ್ತಂಗಡಿ ತಾಲೂಕು ಕೊಕ್ಕಡ ಗ್ರಾಮದ ಅಗರ್ತ ಮನೆ ನಿವಾಸಿ ಎ. ಬಾಳಪ್ಪ ಗೌಡ ಅವರಿಗೆ ಈಗ 65 ವರ್ಷ. ಆದರೆ, ಅವರ ಸಂಶೋಧನ ಪ್ರವೃತ್ತಿ ಯುವಕರನ್ನೂ ನಾಚಿಸುವಂತಿದೆ. ತೋಡಿನಲ್ಲಿ ಹರಿಯುವ ನೀರನ್ನು ಅವರು ಸರಳ ತಂತ್ರಜ್ಞಾನ ಬಳಸಿ ತುಸು ಎತ್ತರದಲ್ಲಿರುವ ತೋಟಕ್ಕೆ ಹರಿಯುವಂತೆ ಮಾಡಿದ್ದಾರೆ.

ತೋಡಿನ ನೀರಿನ ವೇಗವನ್ನೇ ಶಕ್ತಿಯನ್ನಾಗಿಸಿ ನೀರಾವರಿಯ ತಂತ್ರಜ್ಞಾನವನ್ನು ಬಾಳಪ್ಪ ಗೌಡರು ಅಳವಡಿಸಿಕೊಂಡಿದ್ದಾರೆ. ಒಂದಿನಿತೂ ವಿದ್ಯುತ್‌ ಬಳಸದೆ ಏತ ನೀರಾವರಿ ನಮೂನೆಯಲ್ಲಿ ನೀರು ಹರಿಸುತ್ತಿದ್ದಾರೆ.

ಬಾಳಪ್ಪ ಗೌಡರ ತಂತ್ರಜ್ಞಾನಕ್ಕೆ ಬಳಕೆಯಾಗುವುದೆಲ್ಲವೂ ಹಳೆಯ ವಸ್ತುಗಳೇ. ಬಳಸಿ ಎಸೆದ ಪ್ಲಾಸ್ಟಿಕ್‌ ಬುಟ್ಟಿಗಳನ್ನು ತುಂಡರಿಸಿ, ಜೋಡಿಸಿ, ಹರಿಯುವ ನೀರಿಗೆ ಮೈಯೊಡ್ಡಿ ಶಕ್ತಿಯನ್ನು ಸೃಷ್ಟಿಸುವ ಫ್ಯಾನ್‌ ತಯಾರಿಸಿದ್ದಾರೆ. ನೀರನ್ನು ಕೆಳಗಿನಿಂದ ಮೇಲಕ್ಕೆ ಕೊಂಡೊಯ್ಯುವ ಬೆಲ್ಟ್ ಆಗಿ ಹಗ್ಗವನ್ನು ಬಳಸಿಕೊಂಡಿದ್ದಾರೆ. ನೀರನ್ನು ಸಂಗ್ರಹಿಸುವ ಬಕೆಟ್‌ಗಳಾಗಿ ರಬ್ಬರ್‌ ಟ್ಯಾಪಿಂಗ್‌ಗೆ ಬಳಸುವ ಪ್ಲಾಸ್ಟಿಕ್‌ ಪಾತ್ರೆಗಳನ್ನು ಅಳವಡಿಸಿದ್ದಾರೆ. ಈ ಪ್ರಾಕೃತಿಕ ನೀರಾವರಿ ಯೋಜನೆಯಲ್ಲಿ ಅವರು ಖರ್ಚು ಮಾಡಿದ್ದು, ಯಂತ್ರದ ಚಾಲನೆಗಾಗಿ ಬಳಸುವ ಬೇರಿಂಗ್‌ ಖರೀದಿಗೆ ಮಾತ್ರ! ಈ ಯೋಜನೆಗೆ ಕೇವಲ ಒಂದೆರಡು ಸಾವಿರ ರೂ. ಮಾತ್ರ ವೆಚ್ಚವಾಗಿದೆ ಎನ್ನುತ್ತಾರೆ ಬಾಳಪ್ಪ ಗೌಡರು.

ಬಕೆಟ್‌ನಿಂದ ಸಿದ್ಧಪಡಿಸಿದ ಫ್ಯಾನನ್ನು ನೀರಿನಲ್ಲಿ ಅಳವಡಿಸಿದ್ದಾರೆ. ಇದಕ್ಕೆ ಜೋಡಿಸಲಾದ ಹಗ್ಗದ ಬೆಲ್ಟ್ ನೀರಿನ ವೇಗಕ್ಕೆ ತಿರುಗುತ್ತದೆ. ತಿರುಗುವಾಗ ಅಲ್ಲಿ ಬಕೆಟ್‌ ಗಳು ನೀರು ಸಂಗ್ರಹಿಸುತ್ತವೆ. ಬೆಲ್ಟ್ ತಿರುಗಿದಂತೆ ನೀರನ್ನು ಮೇಲಕ್ಕೆ ತಂದು ತೊಟ್ಟಿಗೆ ಸುರಿಯುತ್ತವೆ. ಈ ನೀರು ಪೈಪ್‌ ಮೂಲಕ ಗಿಡಗಳಿಗೆ ಉಣಿಸಲು ಸರಬರಾಜಾಗುತ್ತದೆ.

ಬಾಳಪ್ಪ ಗೌಡರು ಸ್ವತಃ ತೂಗು ಸೇತುವೆಯನ್ನೂ ನಿರ್ಮಿಸಿದ್ದಾರೆ. ತೋಡಿನ ಎರಡು ಬದಿಗಳಲ್ಲಿ ಅವರ ತೋಟವಿದೆ. ಮಳೆಗಾಲದಲ್ಲಿ ಈ ತೋಡಿನಲ್ಲಿ ವೇಗವಾಗಿ ನೀರು ಹರಿಯುವ ಕಾರಣ ದಾಟಲು ಕಷ್ಟ. ಅದಕ್ಕಾಗಿ 60 ಅಡಿ ಉದ್ದದ ತೂಗು ಸೇತುವೆ ಮಾಡಿದ್ದು, ಏಕಕಾಲಕ್ಕೆ ಒಬ್ಬ ವ್ಯಕ್ತಿ ಸಂಚರಿಸಬಹುದು. ಇದಕ್ಕೂ ಅವರು ಖರ್ಚು ಮಾಡಿದ್ದು ಕೇವಲ 6,000 ರೂ. ಕಬ್ಬಿಣದ ಐದು ಅಡಿ ಅಗಲದ ಪಟ್ಟಿಯನ್ನು ಮಾತ್ರ ಖರೀದಿಸಿದ್ದು, ಉಳಿದಂತೆ ಮನೆಯಲ್ಲಿದ್ದ ನಿರುಪಯುಕ್ತ ವಸ್ತುಗಳನ್ನೇ ಬಳಸಿರುವುದು ವಿಶೇಷ.

ಕೃಷಿಗೆ ಉಪಟಳ ಕೊಡುವ ಮಂಗಗಳನ್ನು ಓಡಿಸಲು ಸಶಬ್ದವಾಗಿ ಕಲ್ಲುಗಳ ಮಳೆ ಗೆರೆಯುವ ಕೋವಿಯೊಂದನ್ನು ಅವರು ಆವಿಷ್ಕರಿಸಿದ್ದು, ಪರಿಣಾಮಕಾರಿಯಾಗಿದೆ.

ಏಳನೇ ತರಗತಿ ಕಲಿತಿದ್ದೇನಷ್ಟೇ. ನಾಲ್ಕು ಎಕ್ರೆ ಭೂಮಿಯಲ್ಲಿ ಫ‌ಸಲು ಬೆಳೆಸಲು ಹಂಬಲಿಸಿದೆ. ತೋಡಿನಲ್ಲಿ ಹರಿಯುವ ನೀರು ತೋಟಕ್ಕೆ ಸಿಗದಿದ್ದಾಗ ಏತ ನೀರಾವರಿಯ ಸರಳೀಕೃತ ವಿಧಾನ ಅನುಷ್ಠಾನಿಸಿದೆ. ತೂಗು ಸೇತುವೆ ನಿರ್ಮಿಸಿದೆ. ಮಂಗಗಳ ಹಾವಳಿ ತಡೆಯಲು ಕೋವಿ ತಯಾರಿಸಿದೆ. ಅದನ್ನು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕೃಷಿ ಮೇಳದಲ್ಲೂ ಪ್ರದರ್ಶಿಸಿದ್ದೇನೆ. ಕೋವಿಯ ಸ್ವರೂಪವನ್ನು ಕಂಡು ಲಘುವಾಗಿ ಪರಿಗಣಿಸಿದವರು ಅದರ ಶಬ್ದವನ್ನು ಕೇಳಿ ಬೆಚ್ಚಿ ಬಿದ್ದಿದ್ದರು. ಸರಳ ಗ್ಲೈಡರ್‌ ನಿರ್ಮಿಸುವ ಪ್ರಯತ್ನ ಮಾಡುತ್ತಿದ್ದೇನೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English