ಬೆಳಗಾವಿ: ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮೇಲೆ ಕಾಂಗ್ರೆಸ್ ಯಾವುದೇ ಒತ್ತಡ ಹೇರುತ್ತಿಲ್ಲ. ಅವರೇ ಐದು ವರ್ಷ ಮುಖ್ಯಮಂತ್ರಿ ಆಗಿ ಮುಂದುವರೆಯಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಚಿವ ಜಮೀರ್ ಅಹಮದ್ ಸ್ಪಷ್ಟಪಡಿಸಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಹೆಬ್ಬೆಟ್ಟು ಮುಖ್ಯಮಂತ್ರಿ ಎಂದು ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ಮುಖ್ಯಮಂತ್ರಿಯವರಿಗೆ ಎಲ್ಲ ಸ್ವಾತಂತ್ರ್ಯ ಕೊಡಲಾಗಿದೆ. ನಾವು ಯಾವುದೇ ರೀತಿಯ ಒತ್ತಡ ಹಾಕಿಲ್ಲ. ಕುಮಾರಸ್ವಾಮಿ ಅವರೇ ಐದು ವರ್ಷ ಮುಖ್ಯಮಂತ್ರಿ ಅಂತ ಹೈಕಮಾಂಡ್ ನಿರ್ಧರಿಸಿದೆ ಎಂದರು.
22 ಕ್ಕೆ ಸಂಪುಟ ವಿಸ್ತರಣೆ ಇದೆ, ಸಂಪುಟ ವಿಸ್ತರಣೆ ಆಗೇ ಆಗುತ್ತದೆ, ಇದರಲ್ಲಿ ಗೊಂದಲ ಇಲ್ಲ. ಹೆಚ್ಚುವರಿ ಖಾತೆ ಬದಲಾಯಿಸಿದರೆ ನಮಗೇನು ಸಮಸ್ಯೆ ಇಲ್ಲ, ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಸಂಪುಟದಿಂದ ನನ್ನನ್ನು ಕೈಬಿಟ್ಟರೂ ಒಪ್ಪಿಕೊಳ್ತೇನೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಇನ್ನೂ ಎರಡು ಸ್ಥಾನ ಕೇಳಿದ್ದೇವೆ. ಈ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ 80 ಸ್ಥಾನ ಬಂದಿದೆ ಅಂದರೆ ಅದಕ್ಕೆ ಅಲ್ಪಸಂಖ್ಯಾತ ಸಮುದಾಯವೂ ಕಾರಣ ಎಂದರು.
ಅನ್ವರ್ ಮನಪ್ಪಾಡಿ ವರದಿ ಮಂಡನೆ ಸಂಬಂಧ ಹೈಕೋರ್ಟ್ ಏನು ಆದೇಶ ಮಾಡಿದೆ ಅಂತ ವಿವರ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಪಡೆಯಲು ಇಲಾಖೆ ಕಾರ್ಯದರ್ಶಿ ಜೊತೆ ಚರ್ಚೆ ನಡೆಸುತ್ತೇನೆ. ಕೋರ್ಟ್ ಆದೇಶ ಪ್ರತಿ ಕೈಸೇರಿದ ಬಳಿಕ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.
Click this button or press Ctrl+G to toggle between Kannada and English