ಬೆಂಗಳೂರು: ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಪಡೆದ ಟೆನ್ನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಕುರಾಸ್ ಕ್ರೀಡೆಯಲ್ಲಿ ಕಂಚಿನ ಪದಕ ಪಡೆದ ಬೆಳಗಾವಿಯ ಮಲ್ಲಪ್ರಭಾ ಜಾಧವ್ ಅವರನ್ನು ಉಪಮುಖ್ಯಮಂತ್ರಿ ಹಾಗೂ ಯುವಜನ ಸೇವೆ, ಕ್ರೀಡಾ ಇಲಾಖೆ ಸಚಿವ ಡಾ.ಜಿ. ಪರಮೇಶ್ವರ್ ಸದಾಶಿವನಗರದ ತಮ್ಮ ಕಚೇರಿಯಲ್ಲಿಂದು ಸನ್ಮಾನಿಸಿದರು.
ಬಳಿಕ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದವರಿಗೆ ನಗದು ಬಹುಮಾನವನ್ನು ಕ್ರೀಡಾ ಇಲಾಖೆಯಿಂದ ನೀಡಲಾಗುತ್ತಿದೆ. ರೋಹನ್ ಬೋಪಣ್ಣ ಅವರಿಗೆ 25 ಲಕ್ಷ ರೂ. ಹಾಗೂ ಮಲ್ಲಪ್ರಭಾ ಜಾದವ್ ಅವರಿಗೆ 8 ಲಕ್ಷ ರೂ. ಚೆಕ್ ವಿತರಿಸಲಾಗಿದೆ. ಮಲ್ಲಪ್ರಭಾ ಜಾಧವ್ ಅವರು ನಮ್ಮ ಕ್ರೀಡಾ ಶಾಲೆಯಲ್ಲಿ ತರಬೇತಿ ಪಡೆದಿದ್ದಾರೆ. ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಗ್ರಾಂಡ್ ಮಾಸ್ಟರ್ ಚೆಸ್‌ನಲ್ಲಿ ಮೊದಲ ಸ್ಥಾನ ಪಡೆದ ತೇಜ್ ಕುಮಾರ್ ಹಾಗೂ ಸ್ಟ್ಯಾನಿ ಜಿ.ಎ. ಅವರಿಗೆ ತಲಾ 10 ಲಕ್ಷ ರೂ. ನೀಡಲಾಗಿದೆ ಎಂದರು.
ಇಡೀ ರಾಜ್ಯ, ಜಿಲ್ಲಾವಾರು ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಎಲ್ಲ ಜಿಲ್ಲೆಯಲ್ಲೂ ಮೂಲಸೌಕರ್ಯ, ಸಿಂಥಟಿಕ್ ಟ್ರಾಕ್ ಹಾಗೂ ಇಂಡೋರ್ ಸ್ಟೇಡಿಯಂ ನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
Click this button or press Ctrl+G to toggle between Kannada and English