ಮಂಗಳೂರು : ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಗುರುವಾರ ಸಾರಿಗೆ ಕಚೇರಿಯಲ್ಲಿ ನಡೆದ ಸಾರಿಗೆ ಅದಾಲತ್ ನಲ್ಲಿ ಮಂಗಳೂರು ಮಹಾನಗರದಲ್ಲಿ ನಾಲ್ಕು ಸರಕಾರಿ ಸಿಟಿಬಸ್‌ಗಳ ಓಡಾಟಕ್ಕೆ ತಾತ್ಕಾಲಿಕ ನೆಲೆಯಲ್ಲಿ ಪರವಾನಿಗೆ ನೀಡುವ ಪ್ರಕ್ರಿಯೆಗಳು ಪ್ರಗತಿಯಲಿದ್ದು ಎಪ್ರಿಲ್ ಅಂತ್ಯಕ್ಕೆ ಮಂಜೂರುಗೊಳ್ಳುವ ಸಾಧ್ಯತೆಗಳಿವೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ ಹೇಳಿದರು.
ರಾಜ್ಯ ಜಂಟಿ ಸಾರಿಗೆ ಆಯುಕ್ತ ವಿಜಯವಿಕ್ರಮ್ ಅಧ್ಯಕ್ಷತೆಯಲ್ಲಿ ಸಾರಿಗೆ ಅದಾಲತ್ ನಡೆಯಿತು. ಕೆಎಸ್‌ಆರ್‌ಟಿಸಿ ಸಲ್ಲಿಸಿರುವ ಅರ್ಜಿಗಳಲ್ಲಿ ಬೈಕಂಪಾಡಿಯಿಂದ ಕಂಕನಾಡಿ ವರೆಗೆ 2 ಬಸ್‌ಗಳು ಸೇರಿದಂತೆ ನಾಲ್ಕು ಬಸ್‌ಗಳ ಸಂಚಾರಕ್ಕೆ ಪರವಾನಿಗೆ ನೀಡುವ ಬಗ್ಗೆ ಮುಂದಿನ ಆರ್‌ಟಎ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಅಡೂರು ನಾಗರಿಕ ಸಮಿತಿ ಅಧ್ಯಕ್ಷ ನೂಯಿ ಬಾಲಕೃಷ್ಣ ರಾವ್ ಅವರು ಕಟೀಲು ಹಾಗೂ ಧರ್ಮಸ್ಥಳ ಮಧ್ಯೆ ಕೈಕಂಬ, ಪೊಳಲಿ, ಬಿ.ಸಿ.ರೋಡು ಮಾರ್ಗವಾಗಿ ಸರಕಾರಿ ಬಸ್ ಸಂಚಾರ ಆರಂಭಿಸಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ ಜಂಟಿ ಆಯಕ್ತ ವಿಜಯವಿಕ್ರಮ್ ಅವರು ಈ ಕೋರಿಕೆಯ ಬಗ್ಗೆ ಪರಿಶೀಲಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳೂರು ಸೆಂಟ್ರಲ್‌ನಲ್ಲಿರುವ ಪ್ರೀಪೆಯ್ಡ ಕೌಂಟರ್ ಸುಗಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿರುವ ಕೆಲವು ಸಮಸ್ಯೆಗಳ ಬಗ್ಗೆ ಪೊಲೀಸರ ಜತೆ ಸಭೆ ನಡೆಸಿ ಬಗೆಹರಿಸಲಾಗುವುದು. 15 ದಿನಗಳೊಳಗೆ ಹೊಸ ಕಿಯೋಸ್ಕ್ ಹಾಗೂ ಪ್ರಯಾಣಿಕರಿಗೆ ಶೆಲ್ಟರ್ ಇಲ್ಲಿ ನಿರ್ಮಿಸಲಾಗುವುದು, ಮಂಗಳೂರು ಜಂಕ್ಷನ್ (ಕಂಕನಾಡಿ) ರೈಲು ನಿಲ್ದಾಣದಲ್ಲಿ ಶೀಘ್ರದಲ್ಲೇ ಪ್ರೀಪೆಯ್ಡ ಆಟೋಕೌಂಟರ್ ಆರಂಭಗೊಳ್ಳಲಿದೆ ಎಂದು ಆರ್‌ಟಿಒ ತಿಳಿಸಿದರು.
ಸ್ಮಾರ್ಟ್‌ಕಾರ್ಡ್ ಪ್ರಕ್ರಿಯೆ ಸಂದರ್ಭದಲ್ಲಿ ಪರವಾನಿಗೆ ದಾಖಲೆಪತ್ರಗಳು ಆರ್‌ಟಿಒ ಕಚೇರಿಯಲ್ಲಿರುವುದರಿಂದ ಪೊಲೀಸ್ ತಪಾಸಣೆ ವೇಳೆ ರಿಕ್ಷಾ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖಂಡರಾದ ಆಶೋಕ್ ಕುಮಾರ್ ಶೆಟ್ಟಿ, ವಿಷ್ಣುಮೂರ್ತಿ, ಅರುಣ ಕುಮಾರ್ ಅವರು ಆಯುಕ್ತರ ಗಮನ ಸೆಳೆದಾಗ ಈಬಗ್ಗೆ ಹಿಂಬರಹದೊಂದಿಗೆ ತಾತ್ಕಾಲಿಕ ಪತ್ರವನ್ನು ನೀಡಲು ಜಂಟಿ ಆಯುಕ್ತರು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚಿಸಿದರು.
ಬಸ್‌ಗಳಲ್ಲಿ ಅನುಮೋದಿತ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ನಿಂತು ಪ್ರಯಾಣಿಸುತ್ತಿದ್ದರೆ ಅದಕ್ಕೆ ಬಸ್‌ಮಾಲಕರಿಂದ ಸ್ಟಾಡಿಂಗ್ ತೆರಿಗೆ ಸಂಗ್ರಹಿಸುವಂತೆ ಜಂಟಿ ಆಯುಕ್ತರು ಆರ್‌ಟಿಒ ಅವರಿಗೆ ಸೂಚಿಸಿದರು.
ಸೀಟುಗಳ ಅಳತೆ ಮಾಡಿ ನಿಯಮ ಉಲ್ಲಂಘನೆ ಕಂಡುಬಂದರೆ ಅಂತಹ ಬಸ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು. ಖಾಸಗಿ ಬಸ್‌ಗಳಲ್ಲಿ ಲೈಸನ್ಸ್ ಹೊಂದದೆ ಕರ್ತವ್ಯ ನಿರ್ವಹಿಸುವ ನಿರ್ವಾಹಕರ ವಿರುದ್ಧ ಕ್ರಮಕ್ಕೆ ಸೂಚಿಸಿದರು.
Click this button or press Ctrl+G to toggle between Kannada and English