ಬೆಳಗಾವಿ: ಯಾರ ಮೇಲೆ ಯಾರ ಒತ್ತಡವೂ ಇಲ್ಲ. ಎಲ್ಲರೂ ಪರಸ್ಪರ ವಿಶ್ವಾಸದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.
ಜೆಡಿಎಸ್ನವರಿಂದ ಕೈಶಾಸಕರಿಗೆ ಒತ್ತಡ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದೆಲ್ಲಾ ಸತ್ಯಕ್ಕೆ ದೂರವಾದ ಮಾತು. ಹಾಗೇನಾದರೂ ಅಸಮಾಧಾನಗಳಿದ್ದರೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅದನ್ನು ಬಗೆಹರಿಸುತ್ತಾರೆ. ಸಮ್ಮಿಶ್ರ ಸರ್ಕಾರದ ಶಾಸಕರಿಗೆ ಯಾವುದೇ ಒತ್ತಡವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ವೇಳೆ ಯಾರು ಇರಬೇಕು, ಯಾರು ಇರಬಾರದು ಎಂದು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ. ಕೆಲವರನ್ನು ಸಂಪುಟದಿಂದ ಕೈಬಿಟ್ಟರೆ ಏನು ಮಾಡಲು ಸಾಧ್ಯ.? ತಲೆ ಕೆಡಿಸಿಕೊಳ್ಳುವುದಕ್ಕೆ ಏನಿಲ್ಲ. ಸಂಪುಟದಲ್ಲಿ ಹೊಸ ರಕ್ತ- ಹಳೆ ರಕ್ತ ಎರಡೂ ಇರಲಿ ಬಿಡಿ ಎಂದು ಅಭಿಪ್ರಾಯಪಟ್ಟರು.
ಅಂಬಾನಿ ಕುಟುಂಬದ ಮದುವೆಗೆ ಡಿಕೆಶಿ ಹಾಜರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆತ್ಮೀಯತೆ, ವಿಶ್ವಾಸಗಳು ಇರುವುದರಿಂದ ಕೆಲವರನ್ನು ಮದುವೆಗಳಂಥ ಸಮಾರಂಭಗಳಿಗೆ ಕರೀತಾರೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು. ಸಂಬಂಧಗಳು ಬೇರೆ ರಾಜಕೀಯ ಬೇರೆ. ಪ್ರತಿಪಕ್ಷದವರೂ ಮದುವೆಗಳಿಗೆ ಹೋಗುವುದು ಪ್ರೀತಿ ವಿಶ್ವಾಸದಿಂದಷ್ಟೇ. ನಾನೂ ಕೂಡಾ ಮುಖೇಶ್ ಅಂಬಾನಿ ಮಗಳ ಮದುವೆಗೆ ಹೋಗಿದ್ದೆ. ಇದರಲ್ಲಿ ತಪ್ಪೇನಿದೆ ಎಂದು ದೇಶಪಾಂಡೆ ಪ್ರಶ್ನಿಸಿದರು.
Click this button or press Ctrl+G to toggle between Kannada and English