ಛತ್ತೀಸ್ಗಢ: ನಿನ್ನೆಯಷ್ಟೆ ಛತ್ತೀಸ್ಗಢದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಭೂಪೇಶ್ ಬಘೇಲ್ ಅವರು ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಧಿಕಾರಿ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಮಧ್ಯಪ್ರದೇಶದ ರೈತರ ಸಾಲಮನ್ನಾ ಕಡತಗಳಿಗೆ ಸಹಿ ಹಾಕಿದ ಕಮಲ್ನಾಥ್ರ ಹಾದಿಯನ್ನೇ ಹಿಡಿದ ಬಘೇಲಾ ರೈತರಿಗೆ ಈ ಮೂಲಕ ಭರವಸೆ ತುಂಬಿದ್ದಾರೆ.
ಸಿಎಂ ಆದ ಕೆಲ ಗಂಟೆಗಳಲ್ಲಿಯೇ ಮೂರು ಪ್ರಮುಖ ಘೋಷಣೆಗಳನ್ನು ಮಾಡಿದ ಬಘೇಲ್, ರೈತರ ಸಾಲಮನ್ನಾ, ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ಹಾಗೂ 2013 ರ ಝಿರಂ ಘಾಟಿ ಮಾವೋ ದಾಳಿ ತನಿಖೆಗೆ ಎಸ್ಐಟಿ ರಚನೆಗೆ ಅಂಕಿತ ಹಾಕಿದ್ದಾರೆ. ಚುನಾವಣಾ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನೀಡಿದ ಭರವಸೆಯಂತೆ ರೈತರ ಸಾಲಮನ್ನಾ ಹಾಗೂ ಮೆಕ್ಕೆಜೋಳಕ್ಕೆ ಕ್ವಿಂಟಾಲ್ಗೆ 1700 ರಿಂದ 2500 ರೂವರೆಗೆ ಬೆಂಬಲ ಬೆಲೆ ಘೋಷಿಸಲಾಗಿದೆ ಎಂದು ನೂತನ ಸಿಎಂ ಮಾಹಿತಿ ನೀಡಿದರು.
ಸಹಕಾರಿ ಹಾಗೂ ಗ್ರಾಮೀಣ ಬ್ಯಾಂಕ್ಗಳಲ್ಲಿರುವ 16.65 ಲಕ್ಷ ರೈತರ 6,100 ಕೋಟಿಯಷ್ಟು ಅಲ್ಪಾವಧಿ ಸಾಲವನ್ನು ಮನ್ನಾ ಮಾಡಲು ಛತ್ತೀಸ್ಗಢದ ನೂತನ ಸರ್ಕಾರ ಮುಂದಾಗಿದೆ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ಸಾಲವನ್ನು ಸೂಕ್ತ ಪರಿಶೀಲನೆ ನಂತರ ಮನ್ನಾ ಮಾಡಲಾಗುವುದು ಎಂದೂ ಹೇಳಲಾಗ್ತಿದೆ.
ಮುಖ್ಯಮಂತ್ರಿ ಸ್ಥಾನಕ್ಕಾಗಿ ರೇಸ್ನಲ್ಲಿದ್ದು, ಈಗ ಸಚಿವರಾಗಿರುವ ಟಿಎಸ್ ಸಿಂಗ್ ಡಿಯೊ ಹಾಗೂ ತಾಮ್ರಧ್ವಜ್ ಸಾಹು ಈ ವೇಳೆ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English