ಪುತ್ತೂರು : ತಮ್ಮ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು 2 ದಿನಗಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತೋಟಗಾರಿಕೆಯಲ್ಲಿ ಪರ್ಯಾಯ ಬೆಳೆಗೆ ಪ್ರೊತ್ಸಾಹ ನೀಡುವ ಸಲುವಾಗಿ ಅಡಿಕೆ ಬೆಳೆಗಾರರಿಗೆ ತಮ್ಮ ಕೃಷಿ ತೋಟದಲ್ಲಿ ಅಡಿಕೆ ಹೊರತಾಗಿ ಇತರ ಆಹಾರ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಸಲು ಕೇರಳ ಮಾದರಿಯಲ್ಲಿ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಹೇಳಿದರು.
ಅಡಿಕೆ ಬೆಳೆಗಾರರು ಕೊಳೆರೋಗ, ಹಳದಿ ಎಲೆ ರೋಗದ ಬಾಧೆಯಿಂದ ನಷ್ಟ ಅನುಭವಿಸುತ್ತಿದ್ದು, ಅಡಿಕೆಯ ಬದಲಾಗಿ ಇತರ ಆಹಾರ ಅಥವಾ ತೋಟಗಾರಿಕಾ ಬೆಳೆಗಳನ್ನು ಬೆಳೆಸಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಒಂದು ಎಕ್ರೆಗೆ ಗರಿಷ್ಠ 10 ಲಕ್ಷ ರೂ. ತನಕ ಪರಿಹಾರ ನೀಡಲು ಸರಕಾರ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಿದೆ ಎಂದರು.
ರಾಜ್ಯ ಬರದ ಬವಣೆಯಿಂದ ಬಳಲುತ್ತಿರುವುದರಿಂದ ಯಾವುದೇ ಹೊಸ ತಾಲೂಕು, ಜಿಲ್ಲೆಗಳ ರಚನೆಯ ಪ್ರಸ್ತಾವ ಸರಕಾರದ ಮುಂದಿಲ್ಲ. ಕರಾವಳಿಯಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಉದ್ದೇಶಿತ ಕೋಲ ಪಶುಸಂಗೋಪನಾ ಕಾಲೇಜು ಈ ವರ್ಷದಿಂದಲೇ ಕಾರ್ಯಾರಂಭಿಸಲಿದೆ ಎಂದು ಹೇಳಿದರು.
ಕಳೆದ ಬಾರಿಯ ಮುಂಗಡಪತ್ರದಲ್ಲಿನ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸರಕಾರ ಸಫಲಗೊಂಡಿದ್ದು, ಈ ಬಾರಿಯ ಮುಂಗಡಪತ್ರ ವಿಪಕ್ಷಗಳಿಂದಲೂ ಪ್ರಶಂಸೆಗೆ ಒಳಗಾಗಿರುವುದು ತನಗೆ ಅತೀವ ಸಂತಸ ತಂದಿದೆ ಎಂದು ಸದಾನಂದ ಗೌಡ ಹರ್ಷ ವ್ಯಕ್ತಪಡಿಸಿದರು.
ದ.ಕ. ಜಿಲ್ಲೆಯ ಮಲೆನಾಡು ತಾಲೂಕುಗಳ ಸಾರಿಗೆ ಅಭಿವೃದ್ಧಿಯ ನಿಟ್ಟಿನಲ್ಲಿ ಸುಳ್ಯ, ನೆಲ್ಯಾಡಿ, ಸುಬ್ರಹ್ಮಣ್ಯ ಮತ್ತು ಪುತ್ತೂರುಗಳಲ್ಲಿ ನೂತನ ಕೆಎಸ್‌ಆರ್‌ಟಿಸಿ ಡಿಪೋಗಳನ್ನು ತೆರೆಯಲು ಸರಕಾರ ಕ್ರಮ ಕೈಗೊಳ್ಳಲಿದೆ. ಈ ಭಾಗದ ಮಾರ್ಗಗಳು ರಾಷ್ಟ್ರೀಕೃತಗೊಂಡಿರುವುದರಿಂದ ಸಾರಿಗೆ ಅಭಿವೃದ್ಧಿಗೆ ಕೆಎಸ್‌ಆರ್‌ಟಿಸಿಗೆ ಸರಕಾರ ಮೊದಲ ಆದ್ಯತೆ ನೀಡಲಿದೆ ಎಂದರು.
ಬಂಟ್ವಾಳ ಮೆಸ್ಕಾಂ ಎಂಜಿನಿಯರ್ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಎರಡು ದಿನಗಳೊಳಗೆ ಬಂಧಿಸುವಂತೆ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಆದೇಶಿಸಿರುವುದಾಗಿ ಮುಖ್ಯಮಂತ್ರಿ ಹೇಳಿದರು. ಮಾಣಿ – ಸಂಪಾಜೆ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆದಾರ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಸರಕಾರ ಹಿಂಜರಿಯುವುದಿಲ್ಲ. ಪ್ರಜಾಪೀಡಕರಾಗಿ ಕೆಲಸ ಮಾಡುತ್ತಿರುವ ಗುತ್ತಿಗೆದಾರ ಕಂಪೆನಿಯ ವಿರುದ್ಧ ಕಾನೂನು ಕ್ರಮವೇ ಸರಕಾರಕ್ಕೆ ಅಂತಿಮ ಮಾರ್ಗವಾಗಿದೆ ಎಂದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಪುನರ್ ನಿರ್ಮಾಣ ಕಾರ್ಯಗಳು 12 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದು, ಸರಕಾರ ಈಗಾಗಲೇ 1 ಕೋಟಿ ರೂ. ನೆರವು ಘೋಷಿಸಿದೆ. ಪುನರ್ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ಹೊಣೆಗಾರಿಕೆ ಹೊತ್ತಿರುವ ನಾನು ಅಗತ್ಯ ಬಿದ್ದರೆ ಇನ್ನಷ್ಟು ಅನುದಾನವನ್ನು ಸರಕಾರದಿಂದ ಬಿಡುಗಡೆಗೊಳಿಸುವೆ ಎಂದು ಮುಖ್ಯಮಂತ್ರಿ ಹೇಳಿದರು. ಶ್ರೀ ದೇವಳದ ಪುನರ್ ನಿರ್ಮಾಣಕ್ಕಾಗಿ ನಡೆಯುತ್ತಿರುವ ಶಿಲೆಗಳ ಕೆತ್ತನೆ ಮತ್ತು ಮರಗಳ ಕೆತ್ತನೆ ಕೆಲಸವನ್ನು ವೀಕ್ಷಿಸಿದರು.
ದೇವಳಕ್ಕೆ ಆಗಮಿಸಿದ ಮುಖ್ಯಮಂತ್ರಿಗಳನ್ನು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ, ಶಾಸಕಿ ಮಲ್ಲಿಕಾ ಪ್ರಸಾದ್, ಸಂಸದ ನಳಿನ್ ಕುಮಾರ್ ಕಟೀಲು, ಜಿ.ಪಂ. ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್, ತಾ.ಪಂ. ಅಧ್ಯಕ್ಷ ಡಿ. ಶಂಭು ಭಟ್, ಪುತ್ತೂರು ಪುರಸಭಾ ಸ್ಥಾಯೀ ಸಮಿತಿಯ ಅಧ್ಯಕ್ಷ ಜೀವಂಧರ ಜೈನ್ ಮೊದಲಾದವರು ಸ್ವಾಗತಿಸಿದರು.
Click this button or press Ctrl+G to toggle between Kannada and English