ವಿಠಲ ಮಲೆಕುಡಿಯ ನಕ್ಸಲರ ಚಟುವಟಿಕೆಗಳಿಗೆ ಬೆಂಬಲ ಕೊಡುತ್ತಿದ್ದ :ಎ.ಆರ್‌. ಇನ್‌ಫೆಂಟ್‌

5:28 PM, Friday, April 13th, 2012
Share
1 Star2 Stars3 Stars4 Stars5 Stars
(4 rating, 1 votes)
Loading...

AR Infant

ಮಂಗಳೂರು : ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಎ.ಆರ್‌. ಇನ್‌ಫೆಂಟ್‌ ಅವರು ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಚಿಕ್ಕ ಮಗಳೂರು ಜಿಲ್ಲೆಯ ಶೃಂಗೇರಿ ಮತ್ತಿತರ ಸುತ್ತಮುತ್ತಲ ನಕ್ಸಲ್‌ ಪೀಡಿತ ಪ್ರದೇಶಗಳಿಗೆ ಬುಧವಾರ ಮತ್ತು ಗುರುವಾರ 2 ದಿನಗಳ ಭೇಟಿ ನೀಡಿ ಪರಿಶೀಲಿಸಿ ಎಎನ್‌ಎಫ್‌ ಸಿಬಂದಿ ಮತ್ತು ಸ್ಥಳೀಯ ಜನರ ಜತೆ ಮಾತುಕತೆ ನಡೆಸಿದ ಬಳಿಕ ಗುರುವಾರ ಸಂಜೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಪತ್ರಿಕಾಗೋಷ್ಠಿ ಮಾತನಾಡಿದ ಅವರು ವಿಠಲ ಮಲೆಕುಡಿಯ ನಕ್ಸಲರ ಚಟುವಟಿಕೆಗಳಿಗೆ ಬೆಂಬಲ ಕೊಡುತ್ತಿದ್ದ ಎಂದು ಖಚಿತವಾದ ಹಿನ್ನೆಲೆಯಲ್ಲಿ ಆತನನ್ನು ದಸ್ತಗಿರಿ ಮಾಡಲಾಗಿದೆ. ನಾವು ನಿರಪರಾಧಿಗಳನ್ನು, ಶಂಕಿತರನ್ನು ಅಥವಾ ವಿನಾ ಕಾರಣ ಯಾರನ್ನೂ ಬಂಧಿಸುವುದಿಲ್ಲ. ಅವರ ಚಲನವಲನ, ಸಹವಾಸ ಮತ್ತಿತರ ವಿಷಯಗಳನ್ನು ಪರಿಗಣಿಸಿದ ಬಳಿಕ ಅವರು ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಖಚಿತವಾದ ಬಳಿಕವೇ ಬಂಧಿಸುತ್ತೇವೆ ಎಂದು ವಿವರಣೆ ನೀಡಿದರು.

AR Infantಪೊಲೀಸ್‌ ಇಲಾಖೆಗೆ ಬಂದಿರುವ ಮಾಹಿತಿ ಪ್ರಕಾರ, ಮಂಗಳೂರು ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿ, ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ವಿಠಲ ಮಲೆಕುಡಿಯ ನಕ್ಸಲರ ಜತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡು, ಅವರ ಸಭೆಗೆ ಹಾಜರಾಗುತ್ತಿದ್ದ; ಅಲ್ಲದೆ ಅವರಿಗೆ ತಾತ್ವಿಕ ಬೆಂಬಲ ನೀಡುತ್ತಿದ್ದ. ಆದ್ದರಿಂದ ಆತನನ್ನು ಬಂಧಿಸಲಾಯಿತು ಎಂದು ತಿಳಿಸಿದರು.

ಸರಕಾರ ಪ್ರಕಟಿಸಿದ ನಕ್ಸಲರ ಶರಣಾಗತಿ ಯೋಜನೆಗೆ ಉತ್ತಮ ಪ್ರೋತ್ಸಾಹ ಲಭಿಸುತ್ತಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಲಾಗುವುದು. ಶರಣಾಗುವ ನಕ್ಸಲರಿಗೆ ಇನ್ನಷ್ಟು ಸೇವಾ ಸೌಲಭ್ಯಗಳನ್ನು ವಿಸ್ತರಿಸುವ ಆವಶ್ಯಕತೆ ಇದ್ದರೆ ಯೋಜನೆಯಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರಲಾಗುವುದು ಎಂದವರು ವಿವರಿಸಿದರು.

ವಿವಿಧ ಕಾರಣಗಳಿಗಾಗಿ ಅಥವಾ ಕೆಲವು ಮಂದಿಯ ತಪ್ಪು ಮಾರ್ಗದರ್ಶನ/ ಸಹವಾಸದಿಂದಾಗಿ ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು ಈ ಯೋಜನೆಯ ಉದ್ದೇಶ, ಚಿಕ್ಕಮಗಳೂರಿನ ಮೂವರು ನಕ್ಸಲರು ಈಗಾಗಲೇ ಶರಣಾಗಿದ್ದು, ಇನ್ನೂ ಕೆಲವರು ಶರಣಾಗತಿಯ ಹಂತದಲ್ಲಿದ್ದಾರೆ. ಹಾಗಾಗಿ ಶರಣಾಗತಿ ಯೋಜನೆಯನ್ನು ಮುಂದುವರಿಸಲಾಗುವುದು ಎಂದು ವಿವರಿಸಿದರು.

ನಕ್ಸಲ್‌ ನಿಗ್ರಹ ದಳವನ್ನು ನಿಯೋಜಿಸಿರುವುದು ಅಲ್ಲಿನ ನಿವಾಸಿಗಳಿಗೆ ರಕ್ಷಣೆ ಒದಗಿಸಿ ಅವರಲ್ಲಿ ವಿಶ್ವಾಸವನ್ನು ಮೂಡಿಸುವುದಕ್ಕಾಗಿಯೇ ಹೊರತು ಅವರಿಗೆ ತೊಂದರೆ ಕೊಡುವುದಕ್ಕಲ್ಲ. ಈ ಹಿನ್ನೆಲೆಯಲ್ಲಿ ನಕ್ಸಲ್‌ ಬಾಧಿತ ಪ್ರದೇಶದಲ್ಲಿ ಎಎನ್‌ಎಫ್‌ ಕಾರ್ಯಾಚರಣೆಯನ್ನು ಮುಂದುವರಿಸಲಾಗುವುದು. ಸ್ಥಳೀಯ ಜನರಿಗೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಸರಕಾರದ ವಿವಿಧ ಇಲಾಖೆಗಳ ಸಹಕಾರದಲ್ಲಿ ಪ್ರಯತ್ನಿಸಲಾಗುತ್ತದೆ ಎಂದರು.

ನಿಜವಾಗಿಯೂ ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿದವರ ಸಂಖ್ಯೆ ಬಹಳಷ್ಟು ಕಡಿಮೆ; ಅವರ ಸಂಖ್ಯೆ ಸುಮಾರು 30- 40ರಷ್ಟು ಮಾತ್ರ ಇರಬಹುದು. ಆದರೆ ನಕ್ಸಲಿಸಂ ಬೆಂಬಲಿಸುವವರ ಪ್ರಮಾಣ ದೊಡ್ಡದಿದೆ ಎಂದು ತಿಳಿಸಿದರು.

ನಕ್ಸಲ್‌ ನಿಗ್ರಹ ಪಡೆಯ ಮಹಾದೇವ ಮಾನೆ ಅವರು ಗುಂಡಿಗೆ ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಬಿ ರಿಪೋರ್ಟ್‌ ಸಲ್ಲಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಎಡಿಜಿಪಿ ಹರ್ಷ ವರ್ಧನ ರಾಜು, ಪಶ್ಚಿಮ ವಲಯದ ಐಜಿಪಿ ಪ್ರತಾಪ ರೆಡ್ಡಿ, ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌, ಡಿಸಿಪಿ ಧರ್ಮಯ್ಯ ಅವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English