ಮಂಗಳೂರು: ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಡಿ. 19ರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪಣಂಬೂರು ಠಾಣಾ ಸಿಬ್ಬಂದಿ ರಾತ್ರಿ 2.30ಕ್ಕೆ ತೋಟಬೆಂಗ್ರೆಯ ಸರ್ಕಾರಿ ಶಾಲೆಯ ಬಳಿ ತಲುಪುತ್ತಿದ್ದಂತೆ ಅಲ್ಲಿದ್ದ 4 ಪುಂಡರು ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆಯೊಡ್ಡಿದ್ದರು ಎನ್ನಲಾಗಿದೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ಇಂದು ಬಂಧಿಸಿದ್ದಾರೆ.
ಮಂಗಳೂರು ತೋಟಬೆಂಗ್ರೆಯ ವಿಜೀತ್ ಯಾನೆ ಶಿವರಾಜ್ ಕುಮಾರ್, ಉಳ್ಳಾಲ ಮೊಗವೀರಪಟ್ಣದ ಶ್ರಾವಣ್ ಯಾನೆ ಚಾನು ಬಂಧಿತ ಆರೋಪಿಗಳು. ಉಳಿದಿಬ್ಬರು ಆರೋಪಿಗಳಾದ ರಮೀತ್ ಮತ್ತು ಆಕಾಶ್ ಎಂಬವರಿಗಾಗಿ ಹುಡುಕಾಟ ಮುಂದುವರೆದಿದೆ.
ಬಂಧಿತ ವಿಜೀತ್ ಮೇಲೆ ಪಣಂಬೂರು ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದ್ದು, 2 ಪ್ರಕರಣಗಳು ದಾಖಲಾಗಿವೆ. ಶ್ರಾವಣ್ ಮೇಲೆ ಉಳ್ಳಾಲ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈಗಾಗಲೇ 5 ಪ್ರಕರಣ ದಾಖಲಾಗಿವೆ.
Click this button or press Ctrl+G to toggle between Kannada and English