ಮಂಗಳೂರು: ಎಂಆರ್ಪಿಎಲ್ ವಿಸ್ತರಣೆ ಸಣ್ಣ ಸಂಗತಿಯಲ್ಲ. ತುಂಬಾ ಗಾಬರಿಗೊಳಗಾಗಬಹುದಾದ ಸಂಗತಿ ಎಂದು ಭೋಪಾಲ ಅನಿಲ ದುರಂತ ಸಂತ್ರಸ್ತರ ಪರ ಹೋರಾಟಗಾರ ಡಾ.ಸತಿನಾಥ್ ಸಾರಂಗಿ ಹೇಳಿದರು.
ಕರಾವಳಿ ಕರ್ನಾಟಕ ಅಭಿವೃದ್ಧಿ ವೇದಿಕೆಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ನಡೆದ, ಎಂಆರ್ಪಿಎಲ್ ವಿಸ್ತರಣೆ ವಿರೋಧಿಸಿ, ‘ತುಳುನಾಡು ಉಳಿಸಿ’ ಜನಾಗ್ರಹ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಂಆರ್ಪಿಎಲ್ ಸುತ್ತಮುತ್ತಲಿನ ಪರಿಸರದಲ್ಲಿ ನಾನು ಈಗಾಗಲೇ ಸುತ್ತಾಡಿದ್ದು, ಅಲ್ಲಿಯ ಪರಿಸರ ನೋಡಿ ನನಗೆ ಆನಂದವಾಯಿತು. ಆದರೆ ಇಷ್ಟು ಒಳ್ಳೆಯ ಭೂಪ್ರದೇಶಗಳು ಎಂಆರ್ಪಿಎಲ್ನಿಂದಾಗಿ ನಾಶವಾಗುತ್ತಿದೆಯಲ್ಲಾ ಎಂದು ನನಗೆ ಸಿಟ್ಟು ಇಮ್ಮಡಿಯಾಗುತ್ತಿದೆ ಎಂದರು.
ಭೋಪಾಲ್ನಲ್ಲಿರುವ ಕಾರ್ಖಾನೆಯ ಪರಿಸ್ಥಿತಿ ಮಂಗಳೂರಿನಲ್ಲಿ ಆಗುವುದು ಬೇಡ. ಅಲ್ಲಿಯ ಕಾರ್ಖಾನೆಯ ಕಾರ್ಮಿಕರೇ ಸ್ಥಳೀಯರಿಗೆ ಇದರ ವಿಷಕಾರಿ ಅನಿಲದ ಬಗ್ಗೆ ಹೇಳಿದರೂ, ಜನರು ಈ ಬಗ್ಗೆ ಕಿವಿಗೊಡದೆ ಉದಾಸೀನ ಮಾಡಿದರು. ಇದೇ ಉದಾಸೀನವನ್ನು ಮಂಗಳೂರಿಗರು ಮಾಡುವುದು ಬೇಡ. ಪರಿಸ್ಥಿತಿಯ ಭೀಕರತೆಯನ್ನು ಅರಿತು ಇನ್ನಾದರೂ ಎಚ್ಚೆತ್ತುಕೊಳ್ಳಿ ಎಂದು ಅವರು ಹೇಳಿದರು.
ಈ ಸಂದರ್ಭ ಎಂಆರ್ಪಿಎಲ್ ವಿರುದ್ಧ ಘೋಷಣೆಯನ್ನು ಕೂಗಲಾಯಿತು. ಪರಿಸರ ಉಳಿಸುವ ಬಗ್ಗೆ ಉದಯ್ ಕ್ರಾಂತಿಗೀತೆಗಳನ್ನು ಹಾಡಿದರು. ಟಿ.ಆರ್.ಭಟ್, ವಿದ್ಯಾ ದಿನಕರ್, ವಿಲಿಯಂ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English