ಮಂಗಳೂರು : ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವ ಡಾ| ಎಂ. ವೀರಪ್ಪ ಮೊಲಿ ಅವರು ಭಾನುವಾರ ಮಂಗಳೂರಿನಲ್ಲಿ ವಿಶ್ವ ದೇವಾಡಿಗ ಸಮಾಜದ ಸಭೆಯಲ್ಲಿ ಪತ್ರಕರ್ತರ ಪಶ್ನೆಗಳಿಗೆ ಉತ್ತರಿಸಿ ರಾಜ್ಯದ 123 ತಾಲೂಕುಗಳು ಬರಪೀಡಿತವಾಗಿವೆ ಎಂದು ಮೂರು ತಿಂಗಳ ಹಿಂದೆ ಸರಕಾರ ಗುರುತಿಸಿದ್ದು, ಬಳಿಕ ಪರಿಸ್ಥಿತಿ ನಿಬಾಯಿಸಲು ಯಾವುದೇ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರ ಸಂಬಂಧಿಸಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದವರು ಅವರದೇ ತಾಪತ್ರಯ, ಅಂತಃಕಲಹಗಳಲ್ಲಿ ಮುಳುಗಿದ್ದರು. ವಿಷಯ ತಿಳಿದು ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರದ ಅಧಿಕಾರಿಗಳ ತಂಡದ ಜತೆಗೂ ಸರಕಾರ ಸಹಕರಿಸಲಿಲ್ಲ ಎಂದು ಟೀಕಿಸಿದರು.
ಕೇಂದ್ರ ಸರಕಾರ ಈಗಾಗಲೇ 129 ಕೋಟಿ ರೂ. ಬಿಡುಗಡೆ ಮಾಡಿದ್ದು, ಅದನ್ನು ಖರ್ಚು ಮಾಡಲಾಗಿಲ್ಲ. ರಾಜ್ಯ ಸರಕಾರದ ಪಾಲನ್ನು 12 ದಿನಗಳ ಹಿಂದೆಯಷ್ಟೇ ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದ ಹೆಚ್ಚುವರಿ ಹಣ ಕೋರಿ ರಾಜ್ಯದಿಂದ ಬೇಡಿಕೆ ಬಂದಿಲ್ಲ . ಅಗತ್ಯ ಬಿದ್ದರೆ ಕೇಂದ್ರ ಹೆಚ್ಚಿನ ನೆರವು ನೀಡಲಿದೆ ಎಂದು ಪ್ರತಿಕ್ರಿಯಿಸಿದರು.
ಬರ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ ನೀಡುತ್ತಿರುವುದು ಸ್ವಾಗತಾರ್ಹ. ಆದರೆ ಪೂರಕ ಕಾರ್ಯಕ್ರಮಗಳು ಇನ್ನೂ ಅನುಷ್ಠಾನ ಆಗಿಲ್ಲ. ಕುಡಿಯುವ ನೀರಿನ ಪೂರೈಕೆ, ಜಾನುವಾರಗಳಿಗೆ ಮೇವು ಒದಗಿಸುವ ಕೆಲಸ ನಡೆದಿಲ್ಲ ಎಂದರು.
ಪದವಿ ಪೂರ್ವ ವಿದ್ಯಾರ್ಥಿಗಳ ಉಪನ್ಯಾಸಕರ ಮುಷ್ಕರವನ್ನು ಶೀಘ್ರದಲ್ಲೇ ಮುಗಿಸುವುದು ಅಗತ್ಯವಾಗಿದೆ. ಮೌಲ್ಯಮಾಪನ ತಡವಾದರೆ ಸಿಇಟಿ ಸೇರಿದಂತೆ ವಿವಿಧ ರಾಜ್ಯ ಹಾಗೂ ಕೇಂದ್ರದ ಪ್ರವೇಶ ಪರೀಕ್ಷೆಗಳಲ್ಲಿ ಭಾಗವಹಿಸಬೇಕಾಗಿರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತದೆ. ಆದ್ದರಿಂದ ಉಪನ್ಯಾಸಕರ ಬೇಡಿಕೆಗಳ ಇತ್ಯರ್ಥ ಕುರಿತು ಉಪನ್ಯಾಸಕರು ಹಾಗೂ ಸರಕಾರ ಸಕಾರಾತ್ಮಕವಾಗಿ ಚಿಂತಿಸುವುದು ಅಗತ್ಯವಾಗಿದೆ ಎಂದರು.
Click this button or press Ctrl+G to toggle between Kannada and English