ತುಮಕೂರು: ಡಾಕ್ಟರ್ ಶಿವಕುಮಾರ ಸ್ವಾಮೀಜಿ ಆರೋಗ್ಯವಾಗಿದ್ದಾರೆ. ಪೂರ್ಣ ಗುಣಮುಖರಾದ ಬಳಿಕ ಭಕ್ತರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯವರೆಗೂ ಭಕ್ತಾದಿಗಳು ಸಹಕರಿಸಬೇಕು ಎಂದು ಉಪಮುಖ್ಯಮಂತ್ರಿ ಡಾಕ್ಟರ್ ಜಿ. ಪರಮೇಶ್ವರ್ ತಿಳಿಸಿದರು.
ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಡಿಸಿಎಂ, ಶ್ರೀಗಳು ಆರೋಗ್ಯವಾಗಿದ್ದಾರೆ. ಸಿದ್ದಗಂಗಾ ಶ್ರೀಗಳು ಆಸ್ಪತ್ರೆಯಿಂದ ಮರಳಿ ಬಂದ ಬಳಿಕ ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ಕೊಟ್ಟಿದ್ದೇನೆ. ಶ್ರೀಗಳ ಆರೋಗ್ಯ ಸುಧಾರಿಸಿದೆ. ಎಲ್ಲಾ ಹಾರ್ಮೋನ್ಸ್ ನಾರ್ಮಲ್ ಆಗಿ ಕೆಲಸ ಮಾಡುತ್ತವೆ. ಇನ್ಫೆಕ್ಷನ್ ಆಗುತ್ತೆ ಎಂಬ ಕಾರಣಕ್ಕೆ ಶ್ರೀಗಳನ್ನು ಭೇಟಿ ಮಾಡೋಕೆ ಆಗುತ್ತಿಲ್ಲ, ಸ್ವಲ್ಪ ದಿನಗಳ ಬಳಿಕ ದರ್ಶನ ನೀಡುತ್ತಾರೆ ಎಂದರು.
ನನ್ನ ಬಳಿ ಶ್ರೀಗಳು ಮಾತಾಡಿಲ್ಲ. ಆದರೆ ಕಣ್ಣು ಬಿಟ್ಟು ನನ್ನನ್ನು ನೋಡಿದ್ದಾರೆ, ಪರಮೇಶ್ವರ್ ಬಂದಿದ್ದಾರೆ ಎಂದ ತಕ್ಷಣ ಕಣ್ಣು ಬಿಟ್ಟು ನೋಡಿದರು. ನೋವು ಆಗುತ್ತದೆ ಎಂಬ ಉದ್ದೇಶದಿಂದ ಸ್ವಲ್ಪ ಪೇನ್ ಕಿಲ್ಲರ್ ಔಷಧಿ ನೀಡಿದ್ದಾರೆ. ಶೀಘ್ರದಲ್ಲೇ ಶ್ರೀಗಳು ಚೇತರಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯದ ರಾಜಕೀಯ ಬಗ್ಗೆ ಪ್ರತಿಕ್ರಿಯಿಸಿ ಪರಮೇಶ್ವರ್, ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತಿರುವ ವಿಚಾರ ಸತ್ಯಕ್ಕೆ ದೂರವಾಗಿದೆ. ಸಂಪುಟ ವಿಸ್ತರಣೆ ಬಳಿಕ ಇಂತಹ ಅಸಮಾಧಾನಗಳು ಸಹಜ ಅವರನ್ನು ಮನವೊಲಿಸುವ ಯತ್ನ ಮಾಡುತ್ತೇವೆ. ಅವರ ಜೊತೆ ಮಾತನಾಡುತ್ತೇನೆ ಎಂದರು.
ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಲು ನಾನು ಮತ್ತು ಕೃಷ್ಣಬೈರೇಗೌಡ ಕಾರಣ ಅಲ್ಲ, ಇದು ಪಕ್ಷದ ಹೈಕಮಾಂಡ್ ತೀರ್ಮಾನ, ಯಾವ ಸಂದರ್ಭದಲ್ಲಿ ಯಾರನ್ನು ಸಚಿವರನ್ನಾಗಿ ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು. ಗೃಹ ಖಾತೆ ಎಂ.ಬಿ. ಪಾಟೀಲ್ ಅವರಿಗೆ ನೀಡುವ ವಿಚಾರ ಗೊತ್ತಿಲ್ಲ. ಖಾತೆ ಬದಲಾವಣೆ ಕುರಿತು ಚರ್ಚೆ ನಡೆದಿಲ್ಲ. ಅದನ್ನೆಲ್ಲಾ ಪಕ್ಷ ನಿರ್ಧರಿಸಿದೆ ಎಂದರು.
ಈ ವೇಳೆ ಸಂಸದ ಎಸ್.ಪಿ. ಮುದ್ದ ಹನುಮೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಇತರರು ಹಾಜರಿದ್ದರು.
Click this button or press Ctrl+G to toggle between Kannada and English