ಮಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಪಾಂಡೇಶ್ವರ ಪೊಲೀಸರು ಪಡೀಲ್ ರೈಲು ನಿಲ್ದಾಣದ ಬಳಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪಡೀಲ್ ನಿವಾಸಿಗಳಾದ ಧೀರಜ್ (20) ಹಾಗೂ ಧನು ಯಾನೆ ಧನುರಾಜ್ ಗಾಣದಬೆಟ್ಟು (22) ಬಂಧಿತ ಆರೋಪಿಗಳು. 2015 ಜುಲೈ 30ರಂದು ವೆಲೆನ್ಸಿಯಾ ಬಳಿ ಕೆಲವರು ಸೇರಿಕೊಂಡು ಶ್ರೀಮಂತ ವ್ಯಕ್ತಿಯೊಬ್ಬರನ್ನು ದರೋಡೆ ಮಾಡುವ ಸಂಚು ಹೂಡಿದ್ದರು.
ಮಾರಕಾಯುಧಗಳೊಂದಿಗೆ ಸ್ಕಾರ್ಪಿಯೊ ವಾಹನದಲ್ಲಿದ್ದ ಸಂದರ್ಭ ಸಂತೋಷ್, ಗೌತಮ್, ನಿತಿನ್ ಕುಮಾರ್, ಧೀರಜ್ ಹಾಗೂ ಧನರಾಜ್ ಬಂಧಿಸಲ್ಪಟ್ಟಿದ್ದರು. ಧೀರಜ್ ಹಾಗೂ ಧನರಾಜ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ನ್ಯಾಯಾಲಯ ಅವರಿಗೆ ವಾರಂಟ್ ಜಾರಿಗೊಳಿಸಿತ್ತು.
ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಧನರಾಜ್ ವಿರುದ್ಧ ಕದ್ರಿ, ಮಂಗಳೂರು ಗ್ರಾಮಾಂತರ ಹಾಗೂ ಕಂಕನಾಡಿ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ನೇತೃತ್ವದಲ್ಲಿ ಎಎಸ್ಐ ಚಂದ್ರಶೇಖರ್, ಹೆಚ್‌ಸಿ ಸೂರಜ್, ಕಾನ್‌ಸ್ಟೇಬಲ್ ಭಾಸ್ಕರ, ಸಿದ್ದನಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English