ಮಂಗಳೂರು: ಮಂಗಳೂರಿನ ವಾರ್ಡ್ 60ನೇ ತೋಟಬೆಂಗ್ರೆಯಲ್ಲಿ ಜಿಲ್ಲೆಯಲ್ಲಿಯೇ ಮಾದರಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಶಿಲಾನ್ಯಾಸ ನೆರವೇರಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಅವರ ಮನವಿಯ ಮೇರೆಗೆ ಎಂಆರ್ ಪಿಎಲ್ ಕಂಪೆನಿಯು ಸಾಮಾಜಿಕ ಬದ್ಧತಾ ನಿಧಿಯಡಿಯಲ್ಲಿ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಅಂಗನವಾಡಿ ನಿರ್ಮಾಣಕ್ಕೆ ಮಂಜೂರು ಮಾಡಿದೆ.
ಗುದ್ದಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಕಾಮತ್ ಅವರು, ಎಂಆರ್ ಪಿಎಲ್ ಕಂಪೆನಿಯು ಸಾಮಾಜಿಕ ಬದ್ಧತಾ ನಿಧಿಯ ಅಡಿಯಲ್ಲಿ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ತೋಟಬೆಂಗ್ರೆಯಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಅಂಗನವಾಡಿ ಕಟ್ಟಡಕ್ಕೆ ನೀಡಿದೆ. ತೋಟಬೆಂಗ್ರೆಯ ಈ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಅಂಗನವಾಡಿಗೆ ಬರುವುದರಿಂದ ಇಲ್ಲಿಯೇ ಮಾದರಿ ಅಂಗನವಾಡಿ ನಿರ್ಮಾಣಕ್ಕೆ ರೂಪುರೇಶೆ ಸಿದ್ಧಪಡಿಸಿಕೊಳ್ಳಲಾಯಿತು.
ಸಾಮಾನ್ಯವಾಗಿ ಹತ್ತರಿಂದ ಹದಿನೈದು ಲಕ್ಷ ರೂಪಾಯಿಗಳನ್ನು ಅಂಗನವಾಡಿ ನಿರ್ಮಾಣಕ್ಕೆ ಅನುದಾನವಾಗಿ ನೀಡುವ ಎಂಆರ್ ಪಿಎಲ್ ಸಂಸ್ಥೆ ಈ ಬಾರಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ತನ್ನ ಮನವಿಯ ಮೇರೆಗೆ ಮಂಗಳೂರು ನಗರ ದಕ್ಷಿಣದಲ್ಲಿ ಮಾದರಿ ಅಂಗನವಾಡಿ ನಿರ್ಮಾಣಕ್ಕೆ ಮುಂದಾಗಿ 25 ಲಕ್ಷ ರೂಪಾಯಿಗಳನ್ನು ನೀಡುತ್ತಿರುವುದಕ್ಕೆ ಅವರನ್ನು ಸಂಸದರ ಪರವಾಗಿ ಮತ್ತು ಶಾಸಕನ ನೆಲೆಯಲ್ಲಿ ವಿಶೇಷವಾಗಿ ಅಭಿನಂದಿಸುವುದಾಗಿ ಶಾಸಕ ಕಾಮತ್ ತಿಳಿಸಿದರು.
ನಿರ್ಮಿತಿ ಕೇಂದ್ರದ ಯೋಜನಾ ನಿರ್ಧೇಶಕ ರಾಜೇಂದ್ರ ಕಲ್ಬಾವಿ ಮಾತನಾಡಿ ಮಾದರಿ ಅಂಗನವಾಡಿ ಕೇಂದ್ರದಲ್ಲಿ ಬರುವ ಮಕ್ಕಳಿಗೆ ಅಜ್ಜಿಮನೆಗೆ ಬಂದ ಅನುಭವವಾಗುತ್ತದೆ. ವಿಶೇಷವಾಗಿ ಅಂಗನವಾಡಿಯ ಒಳಾಂಗಣವನ್ನು ವಿನ್ಯಾಸ ಮಾಡಲಾಗುತ್ತದೆ. ಅಡುಗೆ ಮನೆ, ಮಕ್ಕಳಿಗಾಗಿ ವಿಶೇಷ ಶೌಚಾಲಯ, ಆಟ ಆಡಲು ಪ್ರತ್ಯೇಕ ವ್ಯವಸ್ಥೆ ನಿರ್ಮಿಸುತ್ತೇವೆ. ಒಂದು ವೇಳೆ ಅನುದಾನ ಉಳಿದರೆ ಹವಾನಿಯಂತ್ರಿತ ವ್ಯವಸ್ಥೆಯನ್ನು ಕೂಡ ಮಾಡಲಾಗುವುದು ಎಂದು ತಿಳಿಸಿದರು.
ಶಾಸಕರೊಂದಿಗೆ ಎಂಆರ್ ಪಿಎಲ್ ಹಿರಿಯ ಅಧಿಕಾರಿ ರಾಮ ಸುಬ್ರಹ್ಮಣ್ಯ, ಪಾಲಿಕೆ ಸ್ಥಳೀಯ ಸದಸ್ಯೆ ಮೀರಾ ಕರ್ಕೇರಾ, ಬಿಜೆಪಿ ವಾರ್ಡ್ ಅಧ್ಯಕ್ಷ ಗಂಗಾಧರ್ ಸಾಲ್ಯಾನ್, ಬಿಜೆಪಿ ಮುಖಂಡರಾದ ಸುರೇಂದ್ರ ಪಾಂಗಾಳ, ಸಿಡಿಪಿಒ ಶೋಭಾ ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English