ಬೆಂಗಳೂರು: ತೀವ್ರ ಅನಾರೋಗ್ಯ, ಎಚ್1 ಎನ್ 1 ಸೋಂಕಿನಿಂದ ಬಳಲುತ್ತಿದ್ದ ರಾಜ್ಯದ ಐಪಿಎಸ್ ಅಧಿಕಾರಿ ಡಿಐಜಿ ಮಧುಕರ್ ಶೆಟ್ಟಿ ಶುಕ್ರವಾರ ರಾತ್ರಿ ಹೈದರಾಬಾದ್‌ನ ಕಾಂಟಿನೆಂಟಲ್ ಆಸ್ಪತ್ರೆಯಲ್ಲಿ ನಿಧನರಾದರು.
ಈ ವಿಚಾರವನ್ನು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂತ್ ಖಚಿತಪಡಿಸಿದ್ದಾರೆ. ರಾತ್ರಿ 8. 15ರ ಸುಮಾರಿಗೆ ಚಿಕಿತ್ಸೆ ಫಲಿಸದೆ ಡಿಐಜಿ ಮಧುಕರ್ ಶೆಟ್ಟಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 47 ವರ್ಷವಾಗಿದ್ದು, 1999ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಉಡುಪಿ ಜಿಲ್ಲೆ ಮೂಲದ ಹೈದರಾಬಾದ್‌ನ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ಉಪನಿರ್ದೇಶಕರಾಗಿ ಮಧುಕರ್ ಶೆಟ್ಟಿ ಕಾರ್ಯ ನಿರ್ವಹಿಸುತ್ತಿದ್ದರು. 2011ರಲ್ಲಿ ವಿದ್ಯಾಭ್ಯಾಸದ ರಜೆ ಮೇಲೆ ಅಮೆರಿಕಕ್ಕೆ ತೆರಳಿದ್ದ ಅವರು ರಜೆಯಿಂದ ವಾಪಸ್ ಬಂದ ಬಳಿಕ ಡಿಐಜಿ ಆಗಿ ಬಡ್ತಿ ಪಡೆದಿದ್ದರು. ತರಬೇತಿ ಮತ್ತು ನೇಮಕಾತಿ ವಿಭಾಗದ ಡಿಐಜಿ ಆಗಿದ್ದರು. ಬಳಿಕ ಕೇಂದ್ರ ಸೇವೆಗೆ ನಿಯೋಜಿತರಾಗಿ ಹೈದರಾಬಾದ್‌ನ ನ್ಯಾಷನಲ್ ಪೋಲೀಸ್ ಅಕಾಡೆಮಿ (ಎನ್‌ಪಿಎ)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಖ್ಯಾತ ಪತ್ರಕರ್ತ ದಿವಂಗತ ವಡ್ಡರ್ಸೆ ರಘುರಾಮ್ ಶೆಟ್ಟಿ ಅವರ ಪುತ್ರ, 1999ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಮಧುಕರ್ ಶೆಟ್ಟಿ, ಉಡುಪಿ ಜಿಲ್ಲೆಯವರು.
ಅವರು ಹೊಸದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಮತ್ತು ನ್ಯೂಯಾರ್ಕ್ ನ ಯೂನಿವರ್ಸಿಟಿಯಲ್ಲಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಚಿಕ್ಕಮಗಳೂರು ಎಸ್ಪಿಯಾಗಿ, ಲೋಕಾಯುಕ್ತ ಎಸ್ಪಿಯಾಗಿ ಅವರು ಖಡಕ್ ಹಾಗು ಜನಪರ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದರು.
ಚಾಮರಾಜನಗರ ಜಿಲ್ಲೆಯಲ್ಲಿ ಎಸ್ಪಿಯಾಗಿದ್ದಾಗ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಪೊಲೀಸರಿಗೆ ಬಿಸಿ ಮುಟ್ಟಿಸುತ್ತಿದ್ದರು. ಚಾಮರಾಜನಗರ ದಲ್ಲಿ 2003 ರಿಂದ 2004ರಲ್ಲಿ ಎಸ್ಪಿಯಾಗಿ ಕಾರ್ಯನಿರ್ವಹಣೆ ಮಾಡಿದ್ದರು.
Click this button or press Ctrl+G to toggle between Kannada and English