ಮಂಗಳೂರು : ದಕ್ಷಿಣ ಕನ್ನಡದ ಮಲೆನಾಡಿನ ತಪ್ಪಲಿನಲ್ಲಿರುವ ಹಳ್ಳಿಗಳಲ್ಲಿ ಮಂಗನಕಾಯಿಲೆ ಕುರಿತು ಜಾಗೃತಿ ಮೂಡಿಸಲು ಇಲಾಖೆಯ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ. ರಾಮಕೃಷ್ಣ ರಾವ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತಂಡಗಳನ್ನು ರಚಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಅವರು, ಉಣ್ಣಿಗಳಿಂದ ಕಾಯಿಲೆ ಹರಡುವುದರಿಂದ ಕಾಡಂಚಿನ ಮಂದಿ ಕಾಡಿಗೆ ಹೋಗುವುದನ್ನು ಸ್ವಲ್ಪ ಕಾಲ ಸ್ಥಗಿತಗೊಳಿಸುವಂತೆ ಕರೆ ನೀಡಿದರು.
ಎಮ್ಮೆ, ಆಕಳು ಮೊದಲಾದ ಸಾಕುಪ್ರಾಣಿಗಳನ್ನು ಕಾಡಿಗೆ ಬಿಡುತ್ತಾರೆ. ಸೌದೆ ಸಂಗ್ರಹಕ್ಕೆ ಕಾಡಿಗೆ ಹೋಗುವವರಿದ್ದಾರೆ. ಜೇನು ಮತ್ತು ಇನ್ನಿತರ ಕಾಡುತ್ಪತ್ತಿಗಳನ್ನು ಸಂಹ್ರಹಿಸುವವರಿದ್ದಾರೆ. ಇಂತಹವರು ಕಾಡಿಗೆ ಹೋಗುವುದನ್ನು ಸಾಧ್ಯವಾದಷ್ಟು ದೂರ ಮಾಡಬೇಕು ಎಂದು ಡಿಎಚ್‌ಒ ತಿಳಿಸಿದರು.
ಕಾಡಿನಲ್ಲಿ ಮಂಗಗಳು ಸತ್ತಿರುವುದು ತಿಳಿದಲ್ಲಿ ಅದನ್ನು ಅರಣ್ಯ, ಪಶು ಸಂಗೋಪನೆ ಮತ್ತು ಆರೋಗ್ಯ ಇಲಾಖೆಗೆ ತಕ್ಷಣ ತಿಳಿಸ ಬೇಕು. ಇದರಿಂದ ಸತ್ತ ಮಂಗನಲ್ಲಿ ಕಾಯಿಲೆಯ ವೈರಸ್ ಇದೆಯೇ ಎಂದು ಪತ್ತೆ ಹಚ್ಚ ಬಹುದು. ಜತೆಗೆ ಸತ್ತ ಮಂಗನ ಅವಶೇಷಗಳನ್ನು ವೈಜಾನಿಕ ರೀತಿಯಲ್ಲಿ ನಿರ್ವಹಿಸಲು ಅನುಕೂಲವಾಗುತ್ತದೆ. ಮಂಗ ಸತ್ತ 50 ಮೀಟರ್ ಪರಿಧಿಯಲ್ಲಿ ಮೆಲಾಥಿಯನ್ ಎಂಬ ಕೀಟನಾಶಕ ಸಿಂಪಡಿಸಿ ಉಣ್ಣಿಗಳನ್ನು ನಾಶ ಪಡಿಸಲು ಅನುಕೂಲವಾಗುತ್ತದೆ ಎಂದು ಡಾ.ರಾಮಕೃಷ್ಣ ರಾವ್ ನುಡಿದರು.
8-10 ದಿನ ಎಡ ಬಿಡದೆ ವಿಪರೀತವಾಗಿ ಜ್ವರ, ತಲೆನೋವು, ಕೈಕಾಲು ನೋವು, ಸೊಂಟ ನೋವು, ವಿಪರೀತ ನಿಶಕ್ತಿ, ಅತಿಯಾದ ಬಾಯಾರಿಕೆ ಇರುತ್ತದೆ. ಜ್ವರ ಬಂದ ಎರಡು ವಾರಗಳ ಬಳಿಕ ಮೂಗು, ಬಾಯಿ ಮತ್ತು ಗುದದ್ವಾರದಿಂದ ರಕ್ತಸ್ರಾವ ಆಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಯಾವುದೇ ಜ್ವರ ಕಂಡು ಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯ ಬೇಕು. ಕಾಯಿಲೆ ಬಾಧಿತ ಪ್ರದೇಶದವರು ಕಾಡಿಗೆ ಹೋಗುವುದಾದರೆ ಉಣ್ಣಿ ನಿರೋಧಕ ಡಿಎಂಪಿ ತೈಲವನ್ನು ಕೈಕಾಲುಗಳಿಗೆ ಹಚ್ಚಿಕೊಳ್ಳಬೇಕು.,ಕಾಡಿನಿಂದ ಬಂದ ತಕ್ಷಣ ಬಿಸಿ ನೀರಿನಲ್ಲಿ ಸಾಬೂನು ಹಚ್ಚಿ ಸ್ನಾನ ಮಾಡಬೇಕು. ಧರಿಸಿದ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯ ಬೇಕು. ಮಂಗನ ಕಾಯಿಲೆ ದೃಢ ಪಟ್ಟ ಪ್ರದೇಶಗಳ ನಿವಾಸಿಗಳು ಕೆಎ್ಡಿ ನಿರೋಧಕ ಲಸಿಕೆಯನ್ನು ಪಡೆಯಬೇಕು.
ಜಿಲ್ಲೆಯ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಮಂಗನ ಕಾಯಿಲೆ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೆ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡುವುದು ಕಡ್ಡಾಯವಾಗಿದೆ. ಈ ಬಗ್ಗೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಡಾ.ರಾಮಕೃಷ್ಣ ರಾವ್ ನುಡಿದರು.
ಸುದ್ದಿಗೋಷ್ಠಿಯಲ್ಲಿ ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್, ಸರ್ವಲೆನ್ಸ್ ಅಧಿಕಾರಿ ಡಾ.ಪ್ರವೀಣ್‌ಕುಮಾರ್, ಡಾ.ಅರುಣ್‌ಕುಮಾರ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ನವೀನ್, ಡಾ.ಅಶೋಕ್‌ಕುಮಾರ್ ರೈ ಮತ್ತು ಡಾ.ಕಲಾಮಧು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English