ಮಂಗಳೂರು: ಬುಧವಾರ ಸಂಜೆಯ ವೇಳೆಗೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಉತ್ತಮಳೆಯಾಗಿದ್ದು, ಕಳೆದ ಹಲವು ದಿನಗಳಿಂದ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಜನತೆಯು ಮಳೆಯ ತಂಪಿನಿಂದ ನಿಟ್ಟುಸಿರುವ ಬಿಡುವಂತಾಯಿತು. ಆದರೆ ಮಳೆಯ ಪೂರ್ವಸಿದ್ಧತೆಯಿಲ್ಲದೆ ಪೇಟೆಗೆ, ಕಚೇರಿಗಳಿಗೆ ತೆರಳಿದ್ದ ಜನರು ಸಂಜೆ ವೇಳೆಗೆ ಸುರಿದ ದಿಢೀರ್ ಮಳೆಯಿಂದ ಸ್ವಲ್ಪ ಮಟ್ಟಿನ ಸಮಸ್ಯೆ ಎದುರಿಸಿದರು.
ಮಂಗಳವಾರ ತಡರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯಾದರೆ, ಬುಧವಾರ ಸಂಜೆಯ ವೇಳೆಗೆ ಉತ್ತಮ ಮಳೆಯಾಗಿದೆ, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಒಟ್ಟು 20 ಕ್ಕೂ ಅಧಿಕ ವಿದ್ಯುತ್ ತಂತಿ ಕಂಬಗಳು ನೆಲಕ್ಕುರುಳಿದ ಪರಿಣಾಮ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ. ಬಂಟ್ವಾಳದ ಚೆಂಬೂರು ಬಳಿ ಮರವೊಂದು ಮನೆಯ ಮೇಲೆ ಉರುಳಿದ್ದು, ನಷ್ಟ ಸಂಭವಿಸಿದೆ. ಸುಬ್ರಹ್ಮಣ್ಯದಲ್ಲಿ ಆಲಿಕಲ್ಲು ಮಳೆಯಾಗಿದೆ.
ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ಅವಸ್ತವ್ಯಸ್ತವಾಗಿದ್ದು, ಮೆಸ್ಕಾಂ ಸಿಬಂದಿಗಳು ಸಮರೋಪಾದಿಯಲ್ಲಿ ಕೆಲಸ ನಡೆಸುತ್ತಿದ್ದಾರೆ. ಗುರುವಾಯನಕೆರೆಯಲ್ಲಿ ವಿದ್ಯುತ್ ಕಂಬ ನೆಲಕ್ಕುರುಳಿದ ಪ್ರದೇಶದಲ್ಲಿ ಸುಮಾರು 250 ಕ್ಕೂ ಅಧಿಕ ವಾಹನಗಳು ಒಂದೆಡೆ ಬಾಕಿಯಾಗಿ ವಾಹನ ದಟ್ಟನೆ ಉಂಟಾಯಿತು.
ಸುಬ್ರಹ್ಮಣ್ಯದಲ್ಲಿ ಸಂಜೆ 4 ಗಂಟೆಯಿಂದಲೇ ಮಳೆಯಾಗಿದ್ದು, ರಸ್ತೆಯಲ್ಲಿ ಹರಿದ ಮಳೆನೀರಿನಿಂದ ಸಂಚಾರ ವ್ಯವಸ್ಥೆಯಲ್ಲೂ ಕೆಲವೆಡೆ ಸಮಸ್ಯೆಯಾಯಿತು. ಮಳೆಗಾಳಿಯ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕದಲ್ಲೂ ವ್ಯತ್ಯಯವಾಯಿತು.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾದ ಕಾರಣ ತುಂಬೆ ನೀರಿನ ಮಟ್ಟವೂ ಏರಿಕೆಯಾಗುವುದರಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಕಾಣಿಸಿಕೊಳ್ಳುವ ಭೀತಿಯಿಂದ ಇಲ್ಲಿನ ನಾಗರಿಕರು ಪಾರಾಗುವ ಸೂಚನೆ ಕಂಡುಬಂದಿದೆ.
Click this button or press Ctrl+G to toggle between Kannada and English