ಮಂಗಳೂರು: ಆರ್‌ಎಸ್‌ಎಸ್‌ನ ಹಿರಿಯ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್ ಸಹಿತ ಮೂವರು ಹಿಂದೂ ಮುಖಂಡರ ಹತ್ಯೆಗೆ ದುಷ್ಕರ್ಮಿಗಳು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಹಬ್ಬಿದ್ದು, ಮೂವರೂ ನಾಯಕರು ತಮ್ಮ ಸುರಕ್ಷೆ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆೆ.
ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯನುಸಾರ ಈ ಮೂವರ ಸುರಕ್ಷೆಗೆ ಪೊಲೀಸ್ ಇಲಾಖೆ ಎಚ್ಚರ ವಹಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಮಂಗಳೂರಿನ ಪೊಲೀಸ್ ಅಧಿಕಾರಿಗಳು ಇದನ್ನು ದೃಢಪಡಿಸಲು ನಿರಾಕರಿಸಿದ್ದಾರೆ.
ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಅವರಿಗೆ ಗುರುವಾರ ಬೆಳಗ್ಗೆ ಪೊಲೀಸ್ ಇಲಾಖೆಯಿಂದ ಫೋನ್ ಕರೆ ಬಂದಿದ್ದು, “ಎಲ್ಲೂ ಹೋಗಬಾರದು; ಹೆಚ್ಚು ಅಲರ್ಟ್ ಆಗಿರಬೇಕು. ಕಲ್ಲಡ್ಕ ಡಾ| ಪ್ರಭಾಕರ ಭಟ್ ಅವರು ಕೂಡ 2- 3 ದಿನ ಇಲ್ಲಿರಬಾರದು. ವಿಹಿಂಪ ಮುಖಂಡ ಜಗದೀಶ್ ಶೇಣವ ಅವರೂ ಎಚ್ಚರಿಕೆಯಿಂದ ಇರಬೇಕು’ ಎಂದು ಸೂಚಿಸಲಾಗಿತ್ತು ಎನ್ನಲಾಗಿದ್ದು, ಆ ಬಳಿಕ ಹಲವು ಬೆಳವಣಿಗೆಗಳು ನಡೆದವು.
ಬೆಂಗಳೂರಿಗೆ ಕಾರಿನಲ್ಲಿ ತೆರಳಬೇಕಿದ್ದ ಡಾ| ಪ್ರಭಾಕರ ಭಟ್ ಅವರನ್ನು ಪೊಲೀಸ್ ಬೆಂಗಾವಲಿನಲ್ಲಿ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು ಎನ್ನಲಾಗಿದೆ. ಅಲ್ಲಿಂದ ಅವರನ್ನು ಸುರಕ್ಷಿತ ಜಾಗಕ್ಕೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಜಗದೀಶ್ ಶೇಣವ ಮತ್ತು ಶರಣ್ ಪಂಪ್‌ವೆಲ್ ಅವರೂ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಕಲ್ಲಡ್ಕ ಡಾ| ಪ್ರಭಾಕರ ಭಟ್ ಮತ್ತು ಜಗದೀಶ್ ಶೇಣವ ಅವರಿಗೆ ಗನ್ ಮ್ಯಾನ್ ಭದ್ರತೆ ಇದ್ದು, ಹೊರಗಡೆ ಓಡಾಡುವಾಗ ಬೆಂಗಾವಲು ಪೊಲೀಸ್ ಜತೆಗಿರುತ್ತಾರೆ. ಶರಣ್ ಪಂಪ್‌ವೆಲ್‌ಗೆ ಮಾತ್ರ ಗನ್ ಮ್ಯಾನ್ ಭದ್ರತೆ ಇರುವುದಿಲ್ಲ. ರಾಜ್ಯದ ಕರಾವಳಿಯ ಹಿಂದೂ ಮುಖಂಡರ ಹತ್ಯೆಗೆ ಕೇರಳ ಮೂಲದವರಿಂದ ಆತ್ಮಹತ್ಯಾ ದಾಳಿಗೆ ಸಂಚು ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನನಗೆ ಜೀವ ಬೆದರಿಕೆ ಇರುವ ಬಗ್ಗೆ ಪೊಲೀಸರು ಮಾಹಿತಿ ನೀಡಿರುವುದು ಹೌದು, ಈ ಹಿನ್ನೆಲೆಯಲ್ಲಿ ಎಚ್ಚರ ವಹಿಸಲಾಗಿದೆ. ಐವರು ಗನ್‌ಮ್ಯಾನ್ ಭದ್ರತೆ ಇದ್ದು, ಈಗಲೂ ಅಷ್ಟೇ ಇದ್ದಾರೆ ಎಂದು ಡಾ| ಪ್ರಭಾಕರ ಭಟ್ ಹೇಳಿದ್ದಾರೆ.
Click this button or press Ctrl+G to toggle between Kannada and English