ಯಕ್ಷಗಾನಕ್ಕೆ ಪ್ರೇಕ್ಷಕರು ಕಡಿಮೆಯಾಗಿಲ್ಲ: ಪಳ್ಳಿ ಕಿಶನ್ ಹೆಗ್ಡೆ

9:39 PM, Monday, January 14th, 2019
Share
1 Star2 Stars3 Stars4 Stars5 Stars
(3 rating, 1 votes)
Loading...

Pulinche Pratishtana ಮಂಗಳೂರು: ಪ್ರಾತಃ ಸ್ಮರಣೀಯರಾದ ಅನೇಕ ಹಿರಿಯ ಕಲಾವಿದರು ತಮ್ಮ ವಿಶಿಷ್ಟ ಕೊಡುಗೆಯಿಂದ ಯಕ್ಷಗಾನವನ್ನು ಕಟ್ಟಿ ಬೆಳೆಸಿದ್ದಾರೆ. ಪುಳಿಂಚ ರಾಮಯ್ಯ ಶೆಟ್ಟರಂತಹ ಶ್ರೇಷ್ಠ ಸಾಧಕರು ಯಕ್ಷರಂಗದಲ್ಲಿ ಮೆರೆದು ತಮ್ಮದೇ ಆದ ಛಾಪು ಮೂಡಿಸಿ ಕಲಾಭಿಮಾನಿಗಳ ಮನಗೆದ್ದಿದ್ದಾರೆ. ಆ ಪರಂಪರೆ ಇಂದಿಗೂ ಉಳಿದಿರುವುದರಿಂದ ಯಕ್ಷಗಾನಕ್ಕೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಕರ್ನಾಟಕ ಯಕ್ಷಗಾನ ಬಯಲಾಟ ಆಕಾಡೆಮಿ ಮಾಜಿ ಸದಸ್ಯ ಹಾಗೂ ಪಂಚಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಹೇಳಿದ್ದಾರೆ. ಮಂಗಳೂರಿನ ಪುಳಿಂಚ ಸೇವಾ ಪ್ರತಿಷ್ಠಾನವು ಯಕ್ಷಗಾನ ದಶಾವತಾರಿ ದಿ.ಪುಳಿಂಚ ರಾಮಯ್ಯ ಶೆಟ್ಟಿ ಸ್ಮರಣಾರ್ಥ ಬಾಳ್ತಿಲ ಗ್ರಾಮದ ಕಶೆಕೋಡಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯ ಚೆಂಡೆ ಶ್ರೀಕಾರಣಿಕದ ಕಲ್ಲುರ್ಟಿ ದೈವಸ್ಥಾನದ ವಠಾರ ನಿರ್ಮಿಸಲಾದ ದಿ.ಕಲ್ಲಾಡಿ ವಿಠಲ ಶೆಟ್ಟಿ ವೇದಿಕೆಯಲ್ಲಿ ಏರ್ಪಡಿಸಿದ ’ಪುಳಿಂಚ ಸಂಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Pulinche Pratishtana ಸಮಾರಂಭದಲ್ಲಿ ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ ’ಎಂತಹ ಶ್ರೇಷ್ಠ ಕಲಾವಿದರಾದರೂ ಮರಣಾನಂತರ ಅವರನ್ನು ಸ್ಮರಿಸಿಕೊಳ್ಳುವವರು ವಿರಳ. ಆದರೆ ಪುಳಿಂಚ ಶ್ರೀಧರ ಶೆಟ್ಟರು ತಂದೆಯವರ ಹೆಸರಿನಲ್ಲಿ ಸಮೂಹ ಸಂಸ್ಥೆಗಳನ್ನು ಸ್ಥಾಪಿಸಿ, ಯಾವುದೇ ದೇಣಿಗೆ ಸಂಗ್ರಹಿಸದೆ ಅದ್ದೂರಿಯಾಗಿ ಅವರ ಸಂಸ್ಮರಣೆ ಮತ್ತು ಸಾಧಕ ಕಲಾವಿದರಿಗೆ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ಬಿರುದು ಸಹಿತ ಪ್ರಶಸ್ತಿ: ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ದೀಪ ಬೆಳಗಿಸಿ ಕಾರ‍್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮೂವರು ಹಿರಿಯ ಕಲಾವಿದರಿಗೆ ತಲಾ 25 ಸಾವಿರ ರೂಪಾ ನಗದು ಮತ್ತು ಬಿರುದು ನೀಡಿ, ’ಪುಳಿಂಚ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಖ್ಯಾತ ಭಾಗವತ ದಿನೇಶ ಅಮ್ಮಣ್ಣಾಯ ಅವರಿಗೆ ’ಸ್ವರಸಿಂಧೂರ’, ಹಿರಿಯ ಸ್ತ್ರೀ ವೇಷಧಾರಿ ಪುಂಡರೀಕಾಕ್ಷ ಉಪಾಧ್ಯಯರಿಗೆ ’ಯಕ್ಷಕೌಮುದಿ’ ಹಾಗೂ ಪ್ರಸಿದ್ಧ ವೇಷಧಾರಿ ಶಿವರಾಮ ಜೋಗಿ ಅವರಿಗೆ ’ಯಕ್ಷಮಾರ್ತಾಂಡ’ ಬಿರುದಿನೊಂದಿಗೆ ಪ್ರಶಸ್ತಿ ಫಲಕ, ಸ್ಮರಣಿಕೆ ನೀಡಿ ಅತಿಥಿಗಳು ಸನ್ಮಾನಿಸಿದರು. ಅಲ್ಲದೆ ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಕ್ಷರಂಗದ ಚಾರ್ಲಿಚಾಪ್ಲಿನ್ ಸೀತಾರಾಮ ಕುಮಾರ್ ಕಟೀಲು ಅವರನ್ನು ಸಭೆಯಲ್ಲಿ ಅಭಿನಂದಿಸಲಾಯಿತು. ಪ್ರತಿಷ್ಠಾನದ ವತಿಯಿಂದ ಅನಾರೋಗ್ಯ ಪೀಡಿತ ಸಂಜೀವ ಸಪಲ್ಯ ಚೆಂಡೆ ಅವರಿಗೆ ಆರ್ಥಿಕ ನೆರವು ವಿತರಿಸಲಾಯಿತು.

Pulinche Pratishtana ಯಕ್ಷಗಾನದ ಖ್ಯಾತ ಅರ್ಥಧಾರಿ ಅಶೋಕ ಭಟ್ ಉಜಿರೆ ಸಂಸ್ಮರಣಾ ಭಾಷಣ ಮಾಡಿದರು. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯ ಅಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು. ಹುಣಸೂರಿನ ಹೋಟೆಲ್ ಉದ್ಯಮಿ ಎಂ. ಸಂಜೀವ ಶೆಟ್ಟಿ ಉಪಸ್ಥಿತರಿದ್ದರು. ಪುಳಿಂಚ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ನ್ಯಾಯವಾದಿ ಪುಳಿಂಚ ಶ್ರೀಧರ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರತಿಭಾ ಶ್ರೀಧರ ಶೆಟ್ಟಿ ವಂದಿಸಿದರು. ಮಮತಾ ರೈ ಪುಳಿಂಚ, ಸತೀಶ್ ಶೆಟ್ಟಿ ಕೊಡಿಯಾಲ್ ಬೈಲ್ ಮತ್ತು ಸತೀಶ್ ರೈ ಹುಣಸೂರು ಸನ್ಮಾನ ಪತ್ರ ವಾಚಿಸಿದರು. ದಯಾನಂದ ಕತ್ತಲ್‌ಸಾರ್ ಕಾರ್ಯಕ್ರಮ ನಿರೂಪಿಸಿದರು.

ಯಕ್ಷಗಾನ ಪ್ರದರ್ಶನ: ಕಾರ‍್ಯಕ್ರಮಕ್ಕೆ ಮುನ್ನ ಯಕ್ಷಗಾನ ಹಾಸ್ಯವೈಭವ, ನಿಧಿ ಶೆಟ್ಟಿ ಪುಳಿಂಚ ಅವರಿಂದ ಭರತನಾಟ್ಯ ಹಾಗೂ ಸಭಾ ಕಾರ‍್ಯಕ್ರಮದ ಬಳಿಕ ಹನುಮಗಿರಿ ಮೇಳದವರಿಂದ ’ಶ್ರೀ ರಾಮ ಕಾರುಣ್ಯ-ಓಂ ನಮಃ ಶಿವಾಯ’ ಬಯಲಾಟ ಪ್ರದರ್ಶನಗೊಂಡಿತು. ತಡರಾತ್ರಿ ಶ್ರೀ ಕಲ್ಲುರ್ಟಿ ದೈವದ ತ್ರೈಮಾಸಿಕ ಕೋಲ ದೊಂದಿ ಬೆಳಕಿನೊಂದಿಗೆ ಸಮಾಪನಗೊಂಡಿತು.

Pulinche Pratishtana

Pulinche Pratishtana

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English