ಮಂಗಳೂರು : ಯುಪಿಎ ಸರ್ಕಾರದ ಅವಧಿಯಲ್ಲಿ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ ಜೊತೆ ವಿಲೀನವಾಗುತ್ತಿದೆ. ವಿಲೀನ ಪ್ರಕ್ರಿಯೆ ಮೊದಲು ಹೋಗುವುದು ಹಣಕಾಸು ಸಮಿತಿಗೆ. ಹಣಕಾಸು ಸಮಿತಿಯಲ್ಲಿರುವವರು ಕರಾವಳಿ ಜಿಲ್ಲೆಯವರಾದ ವೀರಪ್ಪ ಮೊಯ್ಲಿ, ಅವರ ನೇತೃತ್ವದ ಹಣಕಾಸು ಸಮಿತಿ ವಿಲೀನ ಪ್ರಕ್ರಿಯೆಗೆ ಸಮ್ಮತಿಸಿದೆ. ಕಾಂಗ್ರೆಸ್ನವರು ವಿಲೀನ ಪ್ರಕ್ರಿಯೆ ಬಗ್ಗೆ ಮಾತನಾಡುವ ಮೊದಲು ವೀರಪ್ಪ ಮೊಯಿಲಿಯನ್ನು ಪ್ರಶ್ನಿಸಲಿ. ವೀರಪ್ಪ ಮೊಯ್ಲಿ ಜೊತೆ ಮಾತನಾಡಲು ಅವರು ನನ್ನೊಂದಿಗೆ ಬರಲಿ ಎಂದು ಹೇಳಿದರು.
ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ, ವಿಜಯ ಬ್ಯಾಂಕ್ ಹೆಸರನ್ನು ಉಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ ಎಂದು ಸಂಸದ ಕಟೀಲ್ ಹೇಳಿದರು.
ಇನ್ನು ಹಾಸನದಿಂದ ಬಿಸಿ ರೋಡ್ ತನಕ ಹೆದ್ದಾರಿ ಕಾಮಗಾರಿ ಅಪೂರ್ಣವಾಗಿ ಇರುವುದನ್ನು ವಿರೋಧಿಸಿ ಕಾಂಗ್ರೆಸ್ನವರು ನಡೆಸುತ್ತಿರುವ ಪ್ರತಿಭಟನೆಯನ್ನು ಸೋತವರ ಸಮಾವೇಶ ಎಂದು ಟೀಕಿಸಿದ ಸಂಸದರು, ಚುನಾವಣೆಯಲ್ಲಿ ಸೋತ ಬಳಿಕ ಮನೆಯಲ್ಲಿ ಕುಳಿತು ದೇಹ ಬೆಳೆಸಿದವರು ಇದೀಗ ದೇಹ ಕರಗಿಸಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ವಿಜಯ ಬ್ಯಾಂಕ್ ವಿಲೀನ ವಿಚಾರಕ್ಕೆ ಸಂಬಂಧಪಟ್ಟಂತೆ ಐವನ್ ಡಿಸೋಜಾ ಅವರು ನನ್ನ ವಿರುದ್ಧ ಟೀಕೆ ಮಾಡಿದ್ದಾರೆ. ಅವರು ಹಿಂಬಾಗಿಲಿನಿಂದ ಜನಪ್ರತಿನಿಧಿಯಾದವರು. ನನ್ನ ರೀತಿ ಜನರಿಂದ ಚುನಾಯಿತರಾದವರು ಅಲ್ಲ. ಯಾರದೋ ಕೈಕಾಲು ಹಿಡಿದು ಅವರು ಮೇಲೆ ಬಂದಿದ್ದಾರೆ. ಅವರು ಲೋಕಸಭಾ ಚುನಾವಣೆಗೆ ನಿಂತು ನನ್ನ ಪ್ರತಿಸ್ಪರ್ಧಿಯಾಗಿ ಗೆದ್ದು ತೋರಿಸಲಿ. ಅವರು ಈವರೆಗೂ ಯಾವುದೇ ಚುನಾವಣೆಯನ್ನು ಗೆದ್ದಿಲ್ಲ. ಅವರೇ ಪಕ್ಷದವರ ನಿದ್ದೆಗೆಡಿಸಿದವರು ಎಂದು ನಳಿನ್ ಹೇಳಿದರು.
Click this button or press Ctrl+G to toggle between Kannada and English