ಮಂಗಳೂರು : ನಗರದ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಮಹಾ ನಗರ ಪಾಲಿಕೆಯ ಕಾರ್ಪೊರೇಟರ್‌ಗಳ ನಿಯೋಗ ದ.ಕ. ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ. ತುಂಬೆ ವೆಂಟೆಡ್ ಡ್ಯಾಮ್‌ನಿಂದ ಮೇಲ್ಗಡೆ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಿಗೆ ಕಟ್ಟಿರುವ ಎಲ್ಲ ಅಣೆಕಟ್ಟುಗಳನ್ನು ಡಿಸೆಂಬರ್ ಬಳಿಕ ಮಳೆ ಬರುವ ತನಕ ಜಿಲ್ಲಾಧಿಕಾರಿಯವರು ಸ್ವಾಧೀನಕ್ಕೆ ತಗೆದುಕೊಂಡು ನೀರು ಹಂಚಿಕೆಯ ಬಗ್ಗೆ ಮಹಾನಗರ ಪಾಲಿಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿತು.
ಮಾಜಿ ಮೇಯರ್‌ಗಳಾದ ಎಂ. ಶಶಿಧರ ಹೆಗ್ಡೆ ಮತ್ತು ಕೆ. ಅಶ್ರಫ್ ನೇತೃತ್ವದ ನಿಯೋಗ ಶುಕ್ರವಾರ ಜಿಲ್ಲಾಧಿಕಾರಿ ಡಾ| ಎನ್. ಎಸ್. ಚನ್ನಪ್ಪ ಗೌಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಮಂಗಳೂರು ಮಹಾ ನಗರ ಪಾಲಿಕೆಗೆ ದಿನಕ್ಕೆ 38 ಎಂ.ಜಿ.ಡಿ. ನೀರಿನ ಆವಶ್ಯಕತೆ ಇದೆ. ಈ ವರ್ಷ ಅಕ್ಟೋಬರ್ ಬಳಿಕ ಮಳೆ ಬಾರದಿರುವ ಕಾರಣ ಮತ್ತು ಎಂಆರ್‌ಪಿಎಲ್, ಎ.ಎಂ.ಆರ್, ಮತ್ತಿತರ ಕೈಗಾರಿಕೆಗಳು ಅವುಗಳ ಅಣೆಕಟ್ಟಿನಲ್ಲಿ ನೀರನ್ನು ಶೇಖರಣೆ ಮಾಡಿದ ಕಾರಣ ಪಾಲಿಕೆಗೆ ನೀರಿನ ಸಮಸ್ಯೆ ಎದುರಾಗಿದೆ. ಡಿಸೆಂಬರ್ ಬಳಿಕ ಕಾರ್ಖಾನೆಗಳು ವಿದ್ಯುತ್ ಉತ್ಪಾದನೆ ಮಾಡುವುದನ್ನು ನಿಲ್ಲಿಸಲು ಆದೇಶಿಸ ಬೇಕು ಮತ್ತು ಎಂಆರ್‌ಪಿಎಲ್‌ನ ಸಿಬಂದಿಗೆ ಕುಡಿಯಲು ಮತ್ತು ಸುರಕ್ಷತೆಗೆ ಬೇಕಾದಷ್ಟು ನೀರನ್ನು ಮಾತ್ರ ಪೂರೈಸ ಬೇಕು, ಎಂಎಸ್‌ಇಝಡ್‌ನ ಉದ್ದೇಶಿತ ಅಣೆಕಟ್ಟು ನಿರ್ಮಾಣ ಯೋಜನೆಯ ಕೆಲಸವನ್ನು ಸ್ಥಗಿತಗೊಳಿಸ ಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ.
ನಿಯೋಗದಲ್ಲಿ ಕಾರ್ಪೊರೇಟರ್‌ಗಳಾದ ನವೀನ್ ಆರ್. ಡಿ’ಸೋಜಾ, ಡಿ.ಕೆ. ಅಶೋಕ್ ಕುಮಾರ್, ಮರಿಯಮ್ಮ ತೋಮಸ್, ಜಸಿಂತಾ ವಿಜಯಾ ಆಲ್ಪೆರ್ಡ್, ವಿಜಯ ಲಕ್ಷ್ಮೀ, ಭಾರತಿ ದಿನೇಶ್, ಮಮತಾ ಶೆಣೈ, ಜೆಸಿಂತಾ ಬೊರೇಮಿಯೊ, ಜಿಲ್ಲಾ ಕಾಂಗ್ರೆಸ್‌ನ ಪದಾಧಿಕಾರಿಗಳಾದ ಟಿ.ಕೆ. ಸುಧೀರ್, ಸುಧಾಕರ ಶೆಣೈ, ಲತೀಫ್ ಕಂದಕ್, ಶ್ರೀನಿವಾಸ್ ಶಿಬರೂರು ಮುಂತಾದವರಿದ್ದರು.
Click this button or press Ctrl+G to toggle between Kannada and English