ಮಂಗಳೂರು : ನೀರಿನ ಬಿಲ್ ಪಾವತಿಸಲು ನಾಲ್ಕು ಅಂತಸ್ತು ಮೇಲ್ಪಟ್ಟ ವಾಣಿಜ್ಯ ಮತ್ತು ವಸತಿ ಸಮುಚ್ಚಯಗಳಲ್ಲಿ ‘ಸ್ವಯಂಚಾಲಿತ ರಿಮೋಟ್ ಸೆನ್ಸಾರ್ ಮೆಶಿನ್’ ಅಳವಡಿಸಲು ಚಿಂತಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಹೇಳಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ ಜಂಟಿ ಸಹಭಾಗಿತ್ವದಲ್ಲಿ ಉರ್ವ ಮಾರುಕಟ್ಟೆ ನೂತನ ವಾಣಿಜ್ಯ ಸಂಕೀರ್ಣವನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ನೀರಿನ ಬಿಲ್, ಮನೆ ತೆರಿಗೆಯನ್ನು ಬಡವರು ಸಕಾಲಕ್ಕೆ ಕಟ್ಟುತ್ತಿದ್ದು, ಶ್ರೀಮಂತರು ಇನ್ನೂ ಬಾಕಿ ಇರಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಪ್ರಾಯೋಗಿಕವಾಗಿ ಸ್ವಯಂಚಾಲಿತ ರಿಮೋಟ್ ಸೆನ್ಸಾರ್ ಮೆಶಿನ್ ಅಳವಡಿಸುತ್ತೇವೆ. ಬಳಿಕ ನೀರಿನ ಬಿಲ್ ಪಾವತಿ ಮಾಡದಿದ್ದರೆ ಗೇಟ್ ವಾಲ್ವ್ ಬಂದ್ ಆಗಿ ನೀರು ಬರುವುದು ಸ್ಥಗಿತಗೊಳ್ಳುತ್ತದೆ ಎಂದು ತಿಳಿಸಿದರು.
ಸುಮಾರು 12.62 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ವಾಣಿಜ್ಯ ಸಂಕೀರ್ಣ ಸುಸಜ್ಜಿತ ವಾಗಿದ್ದು, ಇದರಿಂದ ವ್ಯಾಪಾರಸ್ಥರಿಗೆ ಮತ್ತು ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.
ಇಲ್ಲಿ ವ್ಯಾಪಾರಸ್ಥರು ಮತ್ತು ಖರೀದಿದಾರರು ಸ್ವಚ್ಛತೆಯ ಕಡೆಗೆ ಗಮನ ನೀಡಬೇಕಿದೆ. ಯಾವುದೇ ಒಂದು ಪ್ರದೇಶ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಜನಸಾಮಾನ್ಯರು ಸಹಕರಿಸಬೇಕಿದೆ ಎಂದರು.
ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿ’ಸೋಜಾ ಮಾತನಾಡಿ, ಈ ಸಂಕೀರ್ಣದ ಟೆಂಡರ್ ಪ್ರಕಾರ 2 ವರ್ಷಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಕೇವಲ ಒಂದೂವರೆ ವರ್ಷದಲ್ಲಿಯೇ ಪೂರ್ಣಗೊಂಡಿದೆ. ಈ ಹಿಂದೆ ಬಿಜೈ ಮಾರುಕಟ್ಟೆ ಕಾಮಗಾರಿ ಕುಂಟುತ್ತಾ ಸಾಗಿ, ಸುಮಾರು 8 ವರ್ಷ ತಗಲಿತ್ತು ಎಂದರು.
ಮಾರುಕಟ್ಟೆಯಲ್ಲಿ ಜನಸಾಮಾನ್ಯರಿಗೆ ಎಲ್ಲ ರೀತಿಯ ಸವಲತ್ತುಗಳು ಸಿಗಬೇಕು. ನೂತನ ಮಾರುಕಟ್ಟೆಯಲ್ಲಿ ಮೀನು ಮಾರಾಟಗಾರರಿಗೆ ಸಮರ್ಪಕವಾಗ ಸ್ಥಳಾವಕಾಶ ವಿಲ್ಲ ಎಂಬ ಕೂಗು ಈ ಹಿಂದೆ ಕೇಳಿಬಂದಿತ್ತು. ಆದರೆ ಸಂಬಂಧಪಟ್ಟ ಇಲಾಖೆಯ ಜತೆ ಮಾತನಾಡಿ ಸಮಸ್ಯೆ ಬಗೆಹರಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಕಟ್ಟಡದ ವಾಸ್ತುಶಿಲ್ಪಿ ನೆಲ್ಸನ್ ಜಿ. ಪಯಾಸ್ ಮತ್ತು ಅಬ್ದುಲ್ ಆಸಿಫ್ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿ ಸಲಾಯಿತು. ಗ್ರೀನ್ ಟ್ರೀ ಫೌಂಡೇಶನ್‌ನ ಗಣೇಶ್ ಅವರನ್ನು ಗೌರವಿಸಲಾಯಿತು.
ಮೇಯರ್ ಭಾಸ್ಕರ್ ಕೆ. ಮಾತನಾಡಿ, ನಗರ ವೇಗವಾಗಿ ಬೆಳೆಯುತ್ತಿದ್ದು, ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮಂಗಳೂರು ಈಜುಕೊಳ ಕಾಮಗಾರಿ ನಡೆಯುತ್ತಿದ್ದು, ಸುಮಾರು 70 ಕೋ. ರೂ. ವೆಚ್ಚದಲ್ಲಿ 2ನೇ ಹಂತದ ಎಬಿಡಿ ಯೋಜನೆ ಕಾರ್ಯ ಪ್ರಗತಿ ಯಲ್ಲಿದೆ. 55 ಕೋಟಿ ರೂ.ನಲ್ಲಿ ಅಮೃತ್ ಯೋಜನೆ, 145 ಕೋಟಿ ರೂ.ನಲ್ಲಿ ಕೇಂದ್ರ ಮಾರುಕಟ್ಟೆ ಅಭಿವೃದ್ಧಿ, 94 ಕೋಟಿ ರೂ.ನಲ್ಲಿ ಮಲ್ಟಿ ಕಾರು ಪಾರ್ಕಿಂಗ್ ಕಾಮಗಾರಿ ನಡೆಯುತ್ತಿದೆ ಎಂದರು. ಈ ವೇಳೆ ಗ್ರೀನ್ ಟ್ರೀ ಫೌಂಡೇಶನ್ ವತಿಯಿಂದ ಗಣ್ಯರು ಗಿಡ ನೆಟ್ಟರು.
ಶಾಸಕ ಡಿ. ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಮಂಗಳೂರು ನಗರಾಭಿವೃದ್ಧಿ ಆಯುಕ್ತ ಶ್ರೀಕಾಂತ್ ರಾವ್ ಕೆ., ಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್, ಪಾಲಿಕೆ ಮುಖ್ಯಸಚೇತಕ ಶಶಿಧರ ಹೆಗ್ಡೆ, ಪಾಲಿಕೆ ಸದಸ್ಯ ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.
ಉರ್ವ ನೂತನ ವಾಣಿಜ್ಯ ಸಂಕೀರ್ಣದ ಉದ್ಘಾಟನೆಯ ಅಂಗವಾಗಿ ನಗರದ ಲೇಡಿಹಿಲ್‌ನಿಂದ ಸಮಾರಂಭ ನಡೆಯುವ ಜಾಗದವರೆಗೆ ರಸ್ತೆಯ ಡಿವೈಡರ್‌ಗಳಲ್ಲಿ ರಾಜಕಾರಣಿಗಳ ಫ್ಲೆಕ್ಸ್ ಅಳವಡಿಸಲಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.
Click this button or press Ctrl+G to toggle between Kannada and English