ಮೆಸ್ಕಾಂ ನಿಂದ ರೂ.1.38ರಷ್ಟು ದರ ಹೆಚ್ಚಿಸಲು ಪ್ರಸ್ತಾವನೆ

9:11 PM, Thursday, February 7th, 2019
Share
1 Star2 Stars3 Stars4 Stars5 Stars
(No Ratings Yet)
Loading...

mescomಮಂಗಳೂರು :  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ(ಕೆಇಆರ್‌ಸಿ)ದಿಂದ  ವಿದ್ಯುತ್‌ನ ಯುನಿಟೊಂದಕ್ಕೆ 1.38ರಷ್ಟು ದರ ಹೆಚ್ಚಿಸಬೇಕೆಂಬ ಮೆಸ್ಕಾಂ ಪ್ರಸ್ತಾವನೆಗೆ ಸಂಬಂಧಿಸಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿನಡೆದ ಸಾರ್ವಜನಿಕ ವಿಚಾರಣೆ ಸಂದರ್ಭ ವಿವಿಧ ಗ್ರಾಹಕ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂ ಪ್ರಬಲ ವಿರೋಧ ವ್ಯಕ್ತವಾಯಿತು.

ಆಯೋಗದ ಅಧ್ಯಕ್ಷ ಶಂಭು ದಯಾಲ್ ಮೀನ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಹಕ ಸಂಘಟನೆಯ ಸತ್ಯನಾರಾಯಣ ಉಡುಪ ಅವರು ವಿಸ್ತೃತವಾಗಿ ಹಾಗೂ ಅಂಕಿಅಂಶಗಳೊಂದಿಗೆ ವಿದ್ಯುತ್ ದರ ಏರಿಕೆಯನ್ನು ಆಕ್ಷೇಪಿಸಿದರಲ್ಲದೆ, ಮೆಸ್ಕಾಂ 1.35ರಷ್ಟು ದರ ಕಡಿತವನ್ನು ಮಾಡಲು ಅವಕಾಶವಿದೆ ಎಂದು ವಿವರಿಸಿದರು.

ದ.ಕ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯನ್ನು ಒಳಗೊಂಡ ಮೆಸ್ಕಾಂ 706 ಕೋಟಿ ರೂ.ಗಳ ಆರ್ಥಿಕ ಕೊರತೆಯನ್ನು ಮುಂದಿಟ್ಟು ಆಯೋಗದೆದುರು ಯುನಿಟ್‌ಗೆ 1.38 ರೂ.ಗಳ ಬೆಲೆ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದೆ. ಮೆಸ್ಕಾಂಗೆ 1,231 ಕೋಟಿ ರೂ. ಹೊರ ಬಾಕಿ ವಸೂಲಾಗಬೇಕಿದೆ. ಮೆಸ್ಕಾನಿಂದ ಬೆಸ್ಕಾಂಗೆ 230 ಕೋಟಿ ರೂ. ಪಾವತಿಗೆ ಬಾಕಿ ಇದೆ. ಪಾವತಿಯಾಗಬೇಕು. ಕಳೆದ 10 ವರ್ಷಗಳಿಂದ 1 ಸಾವಿರ ಕೋಟಿ ರೂ. ವಿವಿಧ ಕಂಪನಿಗಳು ಮೆಸ್ಕಾಂಗೆ ಪಾವತಿಯಾಗಬೇಕಿದೆ. ಈ ಬಾಕಿ ವಸೂಲಿಗೆ ಕ್ರಮ ಕೈಗೊಂಡಲ್ಲಿ ವಿದ್ಯುತ್ ದರವ್ನು ಕಡಿತ ಮಾಡಬಹುದು ಎಂದರು.

ಯುಪಿಸಿಎಲ್ ಸೇರಿದಂತೆ ಮೆಸ್ಕಾಂ ಇತರ 21 ವಿದ್ಯುತ್ ಉತ್ಪಾದನಾ ಕಂಪನಿಗಳಿಂದ ಏಕಪಕ್ಷೀಯವಾಗಿ ದುಬಾರಿ ದರ ನೀಡಿ ವಿದ್ಯುತ್ ಖರೀದಿ ಮಾಡುತ್ತಿದೆ. ಇದರಿಂದ 150 ಕೋಟಿ ರೂ. ಹೆಚ್ಚುವರಿ ನಷ್ಟವಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಎಂದು ಸರ್ಕಾರ ಹೇಳಿದರೂ, ಹಳೆ ಬಾಕಿ ಹೆಸರಿನಲ್ಲಿ ರೈತ ಗ್ರಾಹಕರಿಗೆ ನೋಟಿಸ್ ನೀಡಲಾಗುತ್ತಿದೆ. ಅಲ್ಲದೆ ಎಲ್ಲ ಪಂಪ್‌ಸೆಟ್‌ಗಳಿಗೆ ಸಂಪರ್ಕ ನೀಡದೆ, ನಿರಂತರ ವಿದ್ಯುತ್ ಪೂರೈಸದೆ ಸರ್ಕಾರದಿಂದ ಸಬ್ಸಿಡಿ ಮೊತ್ತವನ್ನು ಮೆಸ್ಕಾಂ ಪಡೆಯುತ್ತಿದೆ ಎಂದು ಅವರು ಆರೋಪಿಸಿದರು.

ಹಗಲು ಹೊತ್ತಿನಲ್ಲಿಯೂ ಕೆಲವು ಕಡೆ ದಾರಿ ದೀಪಗಳು ಉರಿಯುತ್ತಿರುತ್ತವೆ. ಅವುಗಳ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಆಕ್ಷೇಪ ಸಲ್ಲಿಸಲಾಗಿದ್ದರೂ, ಆಯೋಗದಿಂದ ನಿರ್ದೇಶನ ನೀಡಲಾಗಿದ್ದರೂ ಕ್ರಮವಾಗಿಲ್ಲ. ಹಲವಾರು ಕಡೆ ವಿದ್ಯುತ್ ಸೋರಿಕೆಯಾಗುತ್ತಿದೆ. ಆ ಬಗ್ಗೆಯೂ ಕ್ರಮವಾಗುತ್ತಿಲ್ಲ. ಗ್ರಾಹಕರಿಂದ ಹೆಚ್ಚುವರಿ ಹಣ ಪಡೆಯುವ ಮೊದಲು ಬಾಕಿ ವಸೂಲಾತಿಯನ್ನು ಮಾಡಿ ಎಂದು ಅವರು ಆಗ್ರಹಿಸಿದರು.

ಕೆಸಿಸಿಐ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್ ಮಾತನಾಡಿ, ವಿದ್ಯುತ್ ದರ ಏರಿಕೆ ಸಾರ್ವಜನಿಕರ ಜತೆಗೆ ಕೈಗಾರಿಕೆಗಳಿಗೂ ಭಾರೀ ದೊಡ್ಡ ಹೊಡೆತ. ಈಗಾಗಲೇ ಜಿಎಸ್‌ಟಿ, ನಗದೀಕರಣದಿಂದಾಗಿ ಕೈಗಾರಿಕೆಗಳು ಸಂಕಷ್ಟದಲ್ಲಿವೆ. ಕಳೆದ ನಾಲ್ಕೈದು ವರ್ಷಗಳಿಂದ ಕೈಗಾರಿಕೆಗಳಿಂದ ವಿದ್ಯುತ್ ಬಳಕೆ ಕಡಿಮೆ ಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತೆ ದರ ಏರಿಕೆ ಕೈಗಾರಿಕೆಗಳಿಗೆ ಭಾರೀ ಸಂಕಷ್ಟವನ್ನು ತಂದೊಡ್ಡಲಿದೆ ಎಂದು ಅವರು ಹೇಳಿದರು.

ಮಂಜುಗಡ್ಡೆ ಫ್ಯಾಕ್ಟರಿಗಳ ಪರವಾಗಿ ಮಾತನಾಡಿದ ರಾಜೇಂದ್ರ ಸುವರ್ಣ, ಶೀತಲೀಕರಣ ಘಟಕಗಳಿಗೆ ವಿದ್ಯುತ್ ಅತೀ ಅಗತ್ಯವಾಗಿರುವುದರಿಂದ ಪ್ರತ್ಯೇಕ ದರದ ವ್ಯವಸ್ಥೆಯನ್ನು ಮಾಡಬೇಕು ಎಂದು ಆಗ್ರಹಿಸಿದರು.

ಕೆನರಾ ಕೈಗಾರಿಕಾ ಸಂಘದ ಅಧ್ಯಕ್ಷ ಗೌರವ್ ಹೆಗ್ಡೆ, ರಾಮಕೃಷ್ಣ ಶಮಾ, ಶ್ರೀನಿವಾಸ್ ಭಟ್, ಬಾಲಸುಬ್ರಹ್ಮಣ್ಯ, ವೆಂಕಟಗಿರಿ ಮೊದಲಾದವರು ಮಾತನಾಡಿ ವಿದ್ಯುತ್ ದರ ಏರಿಕೆಯನ್ನು ಪ್ರಬಲವಾಗಿ ವಿರೋಧಿಸಿದರು.

ಸಭೆಯಲ್ಲಿ ಆಯೋಗದ ಸದಸ್ಯರಾದ ಎಚ್.ಡಿ. ಅರುಣ್ ಕುಮಾರ್, ಎಚ್.ಎಂ. ಮಂಜುನಾಥ್ ಉಪಸ್ಥಿತರಿದ್ದರು.

ಮೆಸ್ಕಾಂನ ಕೆಲ ಸಿಬ್ಬಂದಿಗಳು, ಅಧಿಕಾರಿಗಳು ಗ್ರಾಹಕರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದಿಲ್ಲ. ದೂರು ನೀಡಲು ಮುಂದಾಗುವ ವೇಳೆ ದೂರವಾಣಿ ಕರೆಗಳನ್ನು ಸ್ವೀಕರಿಸುವುದಿಲ್ಲ. ಸಹಾಯವಾಣಿ ಸ್ಪಂದಿಸುವುದಿಲ್ಲ ಎಂಬಿತ್ಯಾದಿ ಗ್ರಾಹಕರ ದೂರಿಗೆ ಪ್ರತಿಕ್ರಿಯಿಸಿದ ಆಯೋಗದ ಅಧ್ಯಕ್ಷ ಶಂಭು ದಯಾಲ್ ಮೀನ, ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿದರೆ ಯಾವುದೇ ಸಮಸ್ಯೆಗಳು ಎದುರಾಗಲು ಸಾಧ್ಯವಿಲ್ಲ. ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಮೆಸ್ಕಾಂನ ಸಿಬ್ಬಂದಿ, ಅಧಿಕಾರಿಗಳಿಗೆ ತರಬೇತಿ ನಡೆಸುವ ಅಗತ್ಯವಿದೆ ಎಂದು ಮೆಸ್ಕಾಂ ಆಡಳಿತ ನಿರ್ದೇಶಕರಿಗೆ ಸಲಹೆ ನೀಡಿದರು.

ಮೆಸ್ಕಾಂನಲ್ಲಿ ಒಟ್ಟು 23.31 ಲಕ್ಷ ವಿದ್ಯುತ್ ಗ್ರಾಹಕರಿದ್ದಾರೆ. 16.81 ಲಕ್ಷ ಗೃಹಬಳಕೆ ಗ್ರಾಹಕರಿದ್ದು, 3.13 ಲಕ್ಷ ಕೃಷಿ ಪಂಪುಸೆಟ್ಟುದಾರರಿದ್ದಾರೆ. 2.05 ಲಕ್ಷ ವಾಣಿಜ್ಯ ಗ್ರಾಹಕರಿದ್ದು, 31 ಸಾವಿರ ಕೈಗಾರಿಕಾ ಗ್ರಾಹಕರಿದ್ದಾರೆ. 21 ಸಾವಿರ ಬೀದಿದೀಪ ಸ್ಥಾವರಗಳಿದ್ದು, 15 ಸಾವಿರ ನೀರು ಸರಬರಾಜು ಸ್ಥಾವರ ಗಳಿವೆ. ಮೆಸ್ಕಾಂ ವ್ಯಾಪ್ತಿಯಲ್ಲಿ 86 ಕೆಪಿಟಿಸಎಲ್ ವಿದ್ಯುತ್ ಉಪಕೇಂದ್ರ, 39 ಮೆಸ್ಕಾಂನ ವಿದ್ಯುತ್ ಉಪಕೇಂದ್ರ, 942 ಫೀಡರ್(615 ಗ್ರಾಮೀಣ, 327 ನಗರ), 73,812 ವಿದ್ಯುತ್ ಪರಿವರ್ತಕ, 38,703 ಕಿ.ಮೀ. ಉದ್ದದ ಎಚ್‌ಟಿ ಲೈನ್‌ಗಳು, 82,286 ಕಿ.ಮೀಚ ದೂರದ ಎಲ್‌ಟಿ ಲೈನ್‌ಗಳು ಇವೆ ಎಂದು ಮೆಸ್ಕಾಂ ಆಡಳಿತ ನಿರ್ೇಶಕಿ ಸ್ನೇಹಲ್ ಮಾಹಿತಿ ನೀಡಿದರು.

ಗ್ರಾಹಕರ ನಿರೀಕ್ಷೆಗನ್ನು ಪೂರೈಸಲು ವಿದ್ಯುತ್ ಖರೀದಿ, ವಿದ್ಯುತ್ ಜಾಲವನ್ನು ಉತ್ಕೃಷ್ಟ ಮಟ್ಟದಲ್ಲಿ ನಿರ್ವಹಣೆ ಮಾಡುವುದು ಮತ್ತು ವಿಶ್ವಸನೀಯ ಗ್ರಾಹಕ ಸ್ನೇಹಿ ಕಾರ್ಯ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ವಿದ್ಯುತ್ ಖರೀದಿ ವೆಚ್ಚದಲ್ಲಿನ ಏರಿಕೆ, ಹಣದುಬ್ಬರದ ಕಾರಣವಾಗಿ ನಿರ್ವಹಣಾ ವೆಚ್ಚದಲ್ಲಿ ಏರಿಕೆಯಾಗಿರುವುದರಿಂದ ಯೂನಿಟ್ಟಿಗೆ 1.38 ರೂ. ದರ ಏರಿಕೆ ಅನಿವಾರ್ಯ ಎಂದು ಅವರು ಆರಂಭದಲ್ಲಿ ಆಯೋಗದೆದುರು ಪ್ರಸ್ತಾವನೆ ಸಲ್ಲಿಸಿದರು.

ಮೆಸ್ಕಾಂ ಸಿಬ್ಬಂದಿ ನಡಳಿಕೆ ಬಗ್ಗೆ ವ್ಯಾಪಕ ದೂರು ವ್ಯಕ್ತವಾದ ಹಿನ್ನೆಲೆಯಲ್ಲಿ ತಿಳಿವಳಿಕೆ ಕಾರ್ಯಾಗಾರ ನಡೆಸಲು ಉದ್ದೇಶಿಸಲಾಗಿದೆ. ಅನಧಿಕೃತ ಐಪಿ ಸೆಟ್‌ಗಳ ಪೈಕಿ 10 ಸಾವಿರ ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ. ಇನ್ನು 16 ಸಾವಿರ ಐಪಿ ಸೆಟ್‌ಗಳನ್ನು ವರ್ಷದಲ್ಲಿ ಸಕ್ರಮಗೊಳಿಸಲಾಗುವುದು. ನಿರಂತರ ಜ್ಯೋತಿ ಯೋಜನೆಯಲ್ಲಿ 130 ಫೀಡರ್‌ಗಳನ್ನು ಅಳವಡಿಸಲಾಗುವುದು. ಮುಂದಿನ ಹಂತದಲ್ಲಿ ಡಿಟಿಸಿ ಮೀಟರ್‌ಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮೆಸ್ಕಾಂ ಆಡಳಿತ ನಿರ್ದೇಶಕಿ ಸ್ನೇಹಲ್ ರಾಯಮನೆ ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English