ಬಿಬಿಎಂಪಿ ಮೇಯರ್ ಡಿ. ವೆಂಕಟೇಶಮೂರ್ತಿ ಹಾಗೂ ಉಪ ಮೇಯರ್ ಎಲ್. ಶ್ರೀನಿವಾಸ್ ಆಯ್ಕೆ

12:06 PM, Friday, April 27th, 2012
Share
1 Star2 Stars3 Stars4 Stars5 Stars
(No Ratings Yet)
Loading...

BBMP mayor deputy mayor

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 46ನೇ ಮೇಯರ್ ಆಗಿ ಬಿಜೆಪಿಯ ಡಿ. ವೆಂಕಟೇಶಮೂರ್ತಿ ಹಾಗೂ 47ನೇ ಉಪ ಮೇಯರ್ ಆಗಿ ಎಲ್. ಶ್ರೀನಿವಾಸ್ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಔಪಚಾರಿಕವಾಗಿ ನಡೆದ ಚುನಾವಣೆಯಲ್ಲಿ ಮೇಯರ್, ಉಪ ಮೇಯರ್ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪ್ರಾದೇಶಿಕ ಆಯುಕ್ತ ಶಂಭು ದಯಾಳ್ ಮೀನಾ ಪ್ರಕಟಿಸಿದರು.

ಮೇಯರ್ ಸ್ಥಾನಕ್ಕೆ ಪೈಪೋಟಿ ಇದ್ದರೂ ಡಿ. ವೆಂಕಟೇಶಮೂರ್ತಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಉಪ ಮೇಯರ್ ಸ್ಥಾನಕ್ಕೆ ಪದ್ಮನಾಭನಗರ ವಾರ್ಡ್‌ನ ಎಲ್. ಶ್ರೀನಿವಾಸ್ ಕೂಡ ಅವಿರೋಧವಾಗಿ ಆಯ್ಕೆಯಾದರು. ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೆಗ್ಗನಹಳ್ಳಿ ವಾರ್ಡ್‌ನ ಪಕ್ಷೇತರ ಸದಸ್ಯ ಎಂ.ಬಿ. ಗೋವಿಂದೇಗೌಡ ಕೊನೇ ಗಳಿಗೆಯಲ್ಲಿ ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದರು.

BBMP mayor deputy mayor

ನಿಕಟಪೂರ್ವ ಮೇಯರ್ ಪಿ. ಶಾರದಮ್ಮ ಅವರಿಂದ ಡಿ. ವೆಂಕಟೇಶಮೂರ್ತಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ನಗರ ಬಿಜೆಪಿ ಶಾಸಕರು ಹಾಗೂ ಪಾಲಿಕೆಯ ಸದಸ್ಯರು ಪಕ್ಷ-ಭೇದ ಮರೆತು ಹೂಗುಚ್ಛ ನೀಡಿ ಶುಭ ಹಾರೈಸಿದರು. ಉಪ ಮೇಯರ್ ಎಲ್. ಶ್ರೀನಿವಾಸ್‌ಗೆ ಅಧಿಕಾರ ಹಸ್ತಾಂತರಿಸಬೇಕಾಗಿದ್ದ ನಿಕಟಪೂರ್ವ ಉಪ ಮೇಯರ್ ಎಸ್. ಹರೀಶ್ ಗೈರು ಹಾಜರಿ ಎದ್ದು ಕಂಡಿತು.

ಬೆಳಿಗ್ಗೆ ನಗರದ ಖಾಸಗಿ ಹೋಟೆಲೊಂದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿ. ವೆಂಕಟೇಶಮೂರ್ತಿ ಹೆಸರನ್ನು ಮೇಯರ್ ಸ್ಥಾನಕ್ಕೆ ಅಂತಿಮಗೊಳಿಸಲಾಯಿತು.

ಕುರುಬ ಸಮುದಾಯಕ್ಕೆ ಸೇರಿದ ಡಿ. ವೆಂಕಟೇಶಮೂರ್ತಿ ಹಾಗೂ ಬಿ. ಸೋಮಶೇಖರ್ ನಡುವೆ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಸೋಮಶೇಖರ್ ಮನವೊಲಿಸುವ ಮೂಲಕ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಲಾಯಿತು. ಇದರಿಂದ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳೆರಡಕ್ಕೂ ಅವಿರೋಧ ಆಯ್ಕೆ ನಡೆಯಲು ಹಾದಿ ಸುಗಮವಾಯಿತು.

ಡಿ. ವೆಂಕಟೇಶಮೂರ್ತಿ ಅವರು 1958ರ ಅಕ್ಟೋಬರ್ 8ರಂದು ನಗರದ ಎ.ವಿ. ದೇವಪ್ಪ ಮತ್ತು ವೆಂಕಟಮ್ಮ ದಂಪತಿಯ ಜೇಷ್ಠ ಪುತ್ರನಾಗಿ ನಗರದ ಎನ್.ಆರ್. ಕಾಲೋನಿಯಲ್ಲಿ ಜನನ. ಪತ್ನಿ: ಕೆ. ಪ್ರಭಾ. ಇಬ್ಬರು ಮಕ್ಕಳು: ( ವಿ.ಅಶ್ವಿನಿ, ವಿ. ಕಾರ್ತಿಕ್),

ಎಸ್ಸೆಸ್ಸೆಲ್ಸಿವರೆಗೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ. ದಯಾನಂದ ಸಾಗರ್ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ. 1987ರಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿ ಸರ್ಕಾರಿ ಸೇವೆಗೆ ಸೇರ್ಪಡೆ.

1989ರಲ್ಲಿ ಸರ್ಕಾರಿ ಹುದ್ದೆಗೆ ರಾಜೀನಾಮೆ, ಸಮಾಜ ಸೇವೆ ಆರಂಭ. 1996ರಲ್ಲಿ ಪದ್ಮನಾಭನಗರ, 2001ರಲ್ಲಿ ಶ್ರೀನಿವಾಸನಗರ, 2010ರಲ್ಲಿ ಕತ್ರಿಗುಪ್ಪೆ ವಾರ್ಡ್‌ನಿಂದ ಬಿಜೆಪಿಯಿಂದ ಪಾಲಿಕೆ ಸದಸ್ಯರಾಗಿ ಆಯ್ಕೆ. 1997-98ರಿಂದ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯನಾಗಿ ಸೇವೆ, 2003-04ರಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕನಾಗಿ ಸೇವೆ. ಬಿಬಿಎಂಪಿಯ ಮೇಲ್ಮನವಿ (ಅಪೀಲು) ಸ್ಥಾಯಿ ಸಮಿತಿಯ ಪ್ರಥಮ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾರೆ..

ಎಲ್. ಶ್ರೀನಿವಾಸ್ ಅವರು ಎಲ್ ಲಕ್ಷ್ಮಯ್ಯ- ಚೌಡಮ್ಮ ದಂಪತಿ ಮಗನಾಗಿ 1962ರ ಜೂನ್ 1ರಂದು ಜನನ. ಪತ್ನಿ ಯಶೋಧಾ ಹಾಗೂ ಇಬ್ಬರು ಮಕ್ಕಳಿದ್ದಾರೆ. (ಪುತ್ರ ಮತ್ತು ಪುತ್ರಿ). 2001ರಲ್ಲಿ ಪದ್ಮನಾಭನಗರ ವಾರ್ಡ್‌ನಿಂದ ಪ್ರಥಮ ಬಾರಿಗೆ ಪಾಲಿಕೆ ಸದಸ್ಯನಾಗಿ ಆಯ್ಕೆ. ಬಿಜೆಪಿ ಯುವ ಮೋರ್ಚಾ ನಗರ ಜಿಲ್ಲಾ ಘಟಕದ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಣೆ. 2010ರ ಪಾಲಿಕೆ ಚುನಾವಣೆಯಲ್ಲಿ ಇದೇ ವಾರ್ಡ್‌ನಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English