ಬಂಟ್ವಾಳ : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳಕ್ಕೆ ಶನಿವಾರ ಸಂಜೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಭೇಟಿ ನೀಡಿ, ದರ್ಶನ ಪಡೆದರು.
ಮಂಗಳೂರಿನಲ್ಲಿ ಶಕ್ತಿ ಕೇಂದ್ರ ಹಾಗೂ ಪ್ರಬುದ್ಧ ರ ಗೋಷ್ಠಿಯಲ್ಲಿ ಭಾಗವಹಿಸಿ ವಾಪಸ್ ದೆಹಲಿಗೆ ತೆರಳುವ ಸಂದರ್ಭ ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿದರು.
ಮಂಗಳೂರಿನಿಂದ ರಸ್ತೆ ಮೂಲಕ ಫರಂಗೀಪೇಟೆ, ಕಡೇಗೋಳಿ, ಕಲ್ಪನೆಯಾಗಿ ಪೊಳಲಿ ದೇವಸ್ಥಾನಕ್ಕೆ ಅಗಮಿಸಿದರು. ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸಚಿವರೊಂದಿಗೆ ಇದ್ದರು. ದೇವಳದ ಹೊರಾಂಗಣದಲ್ಲಿ ಸಚಿವ ರಾಜನಾಥ ಸಿಂಗ್ ಅವರನ್ನು ಬ್ರಹ್ಮಕಲಶ ಸಮಿತಿ ಅಧ್ಯಕ್ಷ, ಶಾಸಕ ಯು.ರಾಜೇಶ್ ನಾಯ್ಕ್, ಗೌರವಾಧ್ಯಕ್ಷ ನಾಗರಾಜ ಶೆಟ್ಟಿ, ಏರ್ಯ ಲಕ್ಷೀನಾರಾಯಣ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್, ದೇವಳದ ಅನುವಂಶಿಕ ಆಡಳಿತ ಮೊಕ್ತೇಸರರಾದ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಮೊಕ್ತೇಸರ ತಾರನಾಥ ಆಳ್ವ ಉಳಿಪಾಡಿಗುತ್ತು, ಚೇರಸೂರ್ಯನಾರಾಯಣ ರಾವ್ ಮೊದಲಾದವರು ಸ್ವಾಗತಿಸಿದರು.
ಶ್ರೀದೇವರ ದರ್ಶನ ಪಡೆದ ಸಚಿವರಿಗೆ ಅರ್ಚಕರು, ತಂತ್ರಿವರ್ಯರು ದೇವಳದ ಐತಿಹ್ಯವನ್ನು ಸಂಸ್ಕೃತದಲ್ಲಿ ವಿವರಿಸಿದರಲ್ಲದೆ ಪ್ರಾರ್ಥಿಸಿ ಪ್ರಸಾದವಿತ್ತರು.
ಶಾಸಕ ಯು.ರಾಜೇಶ್ ನಾಯ್ಕ್ ಅವರು ದೇವಳದ ಇತಿಹಾಸ ಪುಸ್ತಕ, ಸ್ಮರಣಿಕೆ ನೀಡಿ ಗೌರವಿಸಿದರು. ತಾಪಂ ಸದಸ್ಯ ಯಶವಂತ ಪೊಳಲಿ, ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಅಧ್ಯಕ್ಷ ದೇವದಾಸ ಶೆಟ್ಟಿ, ಉದಯಕುಮಾರ್ ರಾವ್ ಬಂಟ್ವಾಳ,ಪವನ್ ಕುಮಾರ್ ಶೆಟ್ಟಿ, ಡಾ. ಆಶಾಜ್ಯೋತಿ ರೈ ಮೊದಲಾದವರು ಉಪಸ್ಥಿತರಿದ್ದರು.
ದೇವಳದ ಒಳಾಂಗಣದಲ್ಲಿ ವೈಧಿಕ ವಿಧಿವಿಧಾನಗಳ ಹಿನ್ನಲೆಯಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.30ರವರೆಗೆ ಸಾರ್ವಜನಿಕರಿಗೆ ದೇವರದರ್ಶನಕ್ಕೆ ನಿರ್ಬಂಧಿಸಲಾಗಿತ್ತು. ದೇವಳ ಪ್ರವೇಶದ ಎರಡು ಭಾಗದಲ್ಲಿ ಬ್ಯಾರಿಕೇಡ್ ಹಾಕಿ ತಡೆ ಹಾಕಲಾಗಿತ್ತು.
ಗೃಹ ಸಚಿವ ರಾಜನಾಥ ಸಿಂಗ್ ಸುಮಾರು ಸಂಜೆ 5.23 ಕ್ಕೆ ಅಗಮಿಸಿದ್ದು, 5.40ರ ಹೊತ್ತಿಗೆ ದೇವಳದಿಂದ ವಿಮಾನ ನಿಲ್ದಾಣದತ್ತ ನಿರ್ಗಮಿಸಿದರು.
Click this button or press Ctrl+G to toggle between Kannada and English