ಪೊಳಲಿ : ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀದುರ್ಗಾಪರಮೇಶ್ವರೀ, ಶ್ರೀ ರಾಜ ರಾಜೇಶ್ವರೀ, ಶ್ರೀ ಸುಬ್ರಹ್ಮಣ್ಯ, ಶ್ರೀ ಗಣಪತಿ, ಶ್ರೀ ಭದ್ರಕಾಳಿ ದೇವರ ಪ್ರತಿಷ್ಠೆ- ಜೀವಕಲಶಾಭಿಷೇಕವನ್ನು ಮಾಡಿ ರವಿವಾರ ಮೂಲ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಯಿತು.
ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ರವಿವಾರ ಬೆಳಗ್ಗೆ 7.23ರಿಂದ 8.23ರ ವರೆಗಿನ ಮೀನಲಗ್ನ ಸುಮುಹೂರ್ತದಲ್ಲಿ ಪ್ರತಿಷ್ಠೆ ನಡೆಸಲಾಯಿತು. ಇದಕ್ಕೂ ಮುನ್ನ ಪ್ರಾತಃಕಾಲ 4ರಿಂದ ಪುಣ್ಯಾಹ, ಗಣಹೋಮ, ಪ್ರಾಸಾದ ವಿತರಣೆ ನಡೆಯಿತು.
ಬೆಳಗ್ಗೆ 10.40ಕ್ಕೆ ನಡೆಯುವ ವೃಷಭ ಲಗ್ನ ಸುಮುಹೂರ್ತದಲ್ಲಿ ಧ್ವಜಸ್ತಂಭ ಪ್ರತಿಷ್ಠೆ, ಧ್ವಜಕಲಶಾಭಿಷೇಕ, ಕ್ಷೇತ್ರಪಾಲಸಹಿತ ದೈವಗಳ ಪ್ರತಿಷ್ಠೆ, ಅಂಕುರಪೂಜೆ, ಮಹಾ ಪೂಜೆ ನಡೆಸಲಾಯಿತು. ದೇವರ ಗರ್ಭಗುಡಿಯ ಮುಗುಳಿ ಏರಿಸುವ ಕ್ರಮವನ್ನು ವಿಧಿವತ್ತಾಗಿ ನಡೆಸಲಾಯಿತು.
ನವೀಕೃತ ದೇವಸ್ಥಾನದ ಬಿಲ್ಲವ ಸಮಾಜದವರು ಸಮರ್ಪಿಸಿದ ನೂತನ ಧ್ವಜಸ್ಥಂಭದ ಪ್ರತಿಷ್ಠಾಪನೆ ಈ ವೇಳೆ ನಡೆಸಲಾಯಿತು. ಚಿನ್ನದ ಲೇಪಿತ ನವಿಲಿನ ಮೂರ್ತಿಯನ್ನು ಕೊಡಿಮರದ ತುದಿಯಲ್ಲಿ ಪ್ರತಿಷ್ಠಾಪಿಸಿ ನವಿಲು ಧ್ವಜ ಏರಿಸಲಾಯಿತು. ಮಧ್ಯಾಹ್ನ ಪಾಕಶಾಲೆಯಲ್ಲಿ ಪಲ್ಲಪೂಜೆ ನೆರವೇರಿಸಲಾಯಿತು. ಸಾಯಂಕಾಲ 5ರಿಂದ ದುರ್ಗಾಪೂಜೆ, ಇಂದ್ರಾದಿ ದಿಕ್ಪಾಲ ಪ್ರತಿಷ್ಠೆ, ಮಾತೃಕಾಪೀಠ ಹಾಗೂ ನಿರ್ಮಾಲ್ಯಧಾರಿ ಪ್ರತಿಷ್ಠೆ, ಅಂಕುರಪೂಜೆ, ಮಹಾಬಲಿಪೀಠಾದಿವಾಸ, ಕ್ಷೇತ್ರಪಾಲಾದಿ ದೈವಗಳಿಗೆ ಕಲಶಾವಾಸ ಅವಾಸ ಹೋಮ, ಮಹಾಪೂಜೆ ನಡೆಸಲಾಯಿತು.
ಪೊಳಲಿಯಲ್ಲಿ ನೂತನ ಧ್ವಜಸ್ತಂಭಕ್ಕೆ ಚಿನ್ನದ ನವಿಲಿನ ಮೂರ್ತಿಯನ್ನು ಪ್ರತಿಷ್ಠಾಪಿಸುವ ವೇಳೆ ಮೂರು ಗಿಡುಗಗಳು ಧ್ವಜಸ್ತಂಭದ ಸುತ್ತ ಪ್ರದಕ್ಷಿಣೆ ಹಾಕುತ್ತಿರುವುದಾಗಿ ಭಕ್ತರು ಹೇಳಿಕೊಂಡಿದ್ದು, ಅಚ್ಚರಿ ವ್ಯಕ್ತವಾಗಿದೆ.
ಶ್ರೀ ರಾಜರಾಜೇಶ್ವರೀ ಪ್ರತಿಷ್ಠಾ ಅಷ್ಠಬಂಧ ನೂತನ ಧ್ವಜಪ್ರತಿಷ್ಠಾ ದಿನವಾದ ರವಿವಾರ ಸಾವಿರಾರು ಮಂದಿ ಭಕ್ತರು ಆಗಮಿಸಿ ಶ್ರೀ ದೇವಿಯ ಮೃಣ್ಮಯ ಮೂರ್ತಿಯ ದರ್ಶನ ಪಡೆದರು. ಕಡುಕೆಂಪು ಬಣ್ಣದಿಂದ ಶೋಭಿಸುತಿದ್ದ ಮಾತೆ ಕೇಸರಿ ಬಣ್ಣದಿಂದ ಶೋಭಿಸುತ್ತಿದ್ದರು. ಅಚ್ಚುಕಟ್ಟಾದ ವ್ಯವಸ್ಥೆ ರುಚಿಕಟ್ಟಾದ ಉಪಾಹಾರ, ಅನ್ನಪೂರ್ಣೆಯ ಪ್ರಸಾದವನ್ನು ಲಕ್ಷಾಂತರ ಮಂದಿ ಪ್ರಸಾದ ರೂಪವಾಗಿ ಸ್ವೀಕರಿಸಿದರು. ಕರ್ಣಾಟಕ ಸಂಗೀತ, ಪ್ರಶಂಸ ಕಾಪು ತಂಡ ಬಲೆತೆಲಿಪಾಲೆ, ಅನಘಾ ಪ್ರಸಾದ್ ಅವರಿಂದ ಹರಿಕಥೆ, ಅಭಿಜ್ಞಾ ಭಟ್ ಅವರಿಂದ ಭರತ ನಾಟ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತಸಾಗರ ಕಣ್ತುಂಬಿಕೊಂಡರು.
Click this button or press Ctrl+G to toggle between Kannada and English