ಮಂಗಳೂರು : ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ, ಮೊದಲು ಸರಿಯಾದ ಗುರಿಯನ್ನು ಆಯ್ದುಕೊಳ್ಳಬೇಕು. ಆಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ. ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಿದ್ದಂತೆ, ಆದಾಯವು ತಾನಾಗಿಯೇ ಬರುತ್ತದೆ. ಎಂದು ಪುತ್ತೂರಿನ ಹಿರಿಯ ವಕೀಲರಾದ ಶ್ರೀ ರಾಮಮೋಹನ ರಾವ್ ಅವರು ಹೇಳಿದರು.
ಅವರು ವಿವೇಕಾನಂದ ಕಾನೂನು ಮಹಾವಿದ್ಯಾಲಯ ಪುತ್ತೂರು ಇಲ್ಲಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕಾನೂನು ಉದ್ಯೋಗಾವಕಾಶಗಳ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ. ನ್ಯಾಯಾಧೀಶರು ಮತ್ತು ಕಕ್ಷಿದಾರರ ಮನವನ್ನು ಅರ್ಥ ಮಾಡಿಕೊಂಡಲ್ಲಿ ಮಾತ್ರ, ವಕೀಲ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ಹೇಳಿದರು.
ಪುತ್ತೂರಿನ ಹಿರಿಯ ವಕೀಲರಾದ ಎನ್. ಸುಬ್ರಮಣ್ಯಂ ಕೊಳತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, ಕಾನೂನು ವಿದ್ಯಾರ್ಥಿಗಳು ಓದುವುದನ್ನು ಹವ್ಯಾಸವಾಗಿಸಿಕೊಳ್ಳಬೇಕು. ಕಾನೂನು ವಿದ್ಯಾಭ್ಯಾಸವು ಸಮಾಜದಲ್ಲಿನ ಸಮಸ್ಯೆಗಳು ಮತ್ತು ವೈಯುಕ್ತಿಕ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಂತರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಕಾನೂನು ಕಾಲೇಜಿನ ಅಧ್ಯಯನ ವಿಭಾಗದ ನಿರ್ದೇಶಕರಾದ ಡಾ. ಬಿ. ಕೆ. ರವೀಂದ್ರ ಅವರು ಕಾನೂನು ವಿಭಾಗದಲ್ಲಿ ಹೆಚ್ಚುತ್ತಿರುವ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು. ಮತ್ತೊಂದು ಅವಧಿಯಲ್ಲಿ ಕಾನೂನು ಸಲಹೆಗಾರರಾದ ಶ್ರೀ ಮನೀಷ್ ಕೆ. ಸಾಲಿಯಾನ್ ಮಾತನಾಡಿ, ವೃತ್ತಿ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಬಹುದು ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ವಿವೇಕಾನಂದ ಕಾನೂನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಪ್ರಸಾದ್ ಎ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಕಾಲೇಜಿನ ಕಾನೂನು ಉಪನ್ಯಾಸಕಿ ಶ್ರೀಮತಿ ಸಂಗೀತಾ ಎಸ್. ಎಂ. ಕಾರ್ಯಕ್ರಮವನ್ನು ನಿರೂಪಿಸಿದರು. ೯೦ಕ್ಕೂ ಅಧಿಕ ಪದವಿ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.
Click this button or press Ctrl+G to toggle between Kannada and English