ಬೆಳ್ತಂಗಡಿ : ಬಿಜೆಪಿ ಮಂಡಲ ಅಧ್ಯಕ್ಷರಾಗಿದ್ದ ರಂಜನ್ ಗೌಡ ಕಾಂಗ್ರೆಸ್ ಸೇರಿದ್ದಾರೆ. ಈ ಬೆಳವಣಿಗೆ ಬಿಜೆಪಿ ಪಾಳಯದಲ್ಲಿ ಗೊಂದಲ ಮೂಡಿಸಿದೆ. ಬೆಳ್ತಂಗಡಿಯಲ್ಲಿ ಆಪರೇಷನ್ ಹಸ್ತ ಯಶಸ್ವಿಯಾಗಿದೆ. ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊಂದಿದ್ದ ರಂಜನ್ ಗೌಡ ಕಾಂಗ್ರೆಸ್‌ಗೆ ಹಾರಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬೆಳ್ತಂಗಡಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರಂಜನ್ ಗೌಡ ಅವರಿಗೆ ಕೊನೆಯ ಹಂತದಲ್ಲಿ ಟಿಕೆಟ್ ಕೈ ತಪ್ಪಿತ್ತು. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಹರೀಶ್ ಪೂಂಜಾ ಅವರಿಗೆ ಟಿಕೆಟ್ ನೀಡಲಾಗಿತ್ತು . ಇದರಿಂದ ಅಸಮಾಧಾನಗೊಂಡಿದ್ದ ರಂಜನ್ ಗೌಡ ಪಕ್ಷದ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು.
ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ರಂಜನ್ ಗೌಡ ಈಗ ಕಮಲ ಬಿಟ್ಟು ಹಸ್ತದ ಕೈ ಹಿಡಿದಿದ್ದಾರೆ. ಮಾಹಿತಿಗಳ ಪ್ರಕಾರ ರಂಜನ್ ಗೌಡ ನಾಳೆ ಅಧಿಕೃತವಾಗಿ ಕಾಂಗ್ರೆಸ್ ಸೇರಲಿದ್ದಾರೆ. ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಪ್ರಕ್ರಿಯೆ ನಾಳೆ ನಡೆಯಲಿದೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ರಂಜನ್ ಗೌಡ ಭೇಟಿ ಮಾಡಿದ್ದಾರೆ. ರಾಜ್ಯ ನಾಯಕರ ಸಮ್ಮತಿ ಮೇರೆಗೆ ರಂಜನ್ ಗೌಡ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ರಂಜನ್ ಗೌಡ ಅವರ ತಂದೆ ಗಂಗಾಧರ ಗೌಡ ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲೇ ಕಾಂಗ್ರೆಸ್ ಸೇರಿದ್ದರು. ಈಗ ರಂಜನ್ ಗೌಡ ಕಾಂಗ್ರೆಸ್ ಸೇರ್ಪಡೆಯಿಂದ ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಜೆಪಿಗೆ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ವಿಮರ್ಶಿಸಲಾಗುತ್ತಿದೆ.
Click this button or press Ctrl+G to toggle between Kannada and English