ಕೆಲವೇ ಉದ್ಯಮಿಗಳ ರಕ್ಷಣೆಗಾಗಿ ವಿಜಯ ಬ್ಯಾಂಕನ್ನು ಬಲಿ ಕೊಡಲಾಯಿತು : ಮಹಾಬಲ ಮಾರ್ಲ

10:14 AM, Thursday, April 4th, 2019
Share
1 Star2 Stars3 Stars4 Stars5 Stars
(4 rating, 1 votes)
Loading...

Mahabala marlaಮಂಗಳೂರು: ಏಪ್ರಿಲ್ 1 ರಂದು ಬ್ಯಾಂಕ್ ಆಫ್ ಬರೋಡಾದೊಂದಿಗೆ  ವಿಲೀನಗೊಂಡಿರುವ ದ.ಕ. ಜಿಲ್ಲೆಯ  ಪ್ರತಿಷ್ಠಿತ ವಿಜಯ ಬ್ಯಾಂಕ್  ಬಗ್ಗೆ ಹೇಳಿಕೆ ನೀಡಿರುವ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು, ಈ ವಿಲೀನೀಕರಣಕ್ಕೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಚಿದಂಬರಂ ಅವರೇ ಕಾರಣ ಎಂದು ಹೇಳುತ್ತಿದ್ದಾರೆ. ಇದರಿಂದ ಸಂಸದ ನಳಿನ್ ಕುಮಾರ್ ಅವರು ತಮ್ಮ ವೈಫಲ್ಯತೆಯನ್ನು ಮುಚ್ಚಿಹಾಕಲು ಮತ್ತೊಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಮಹಾಬಲ ಮಾರ್ಲ ಹೇಳಿದರು.

ನಗರದ ಬೆಂದೂರ್ ವೆಲ್ನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ವಿಲೀನಗೊಳಿಸುವ ಪ್ರಕ್ರಿಯೆ ಕೇವಲ ಒಂದೇ ದಿನದಲ್ಲಿ ಮುಗಿಸಲಾಗಿದ್ದು, ಇದರ ಹಿಂದೆ ದುರುದ್ದೇಶವಿರುವುದು ಸ್ಪಷ್ಟವಾಗಿದೆ. ಎನ್ಎಪಿ ಅಕೌಂಟ್ಗಳನ್ನು ಹೊಂದಿರುವ ಬ್ಯಾಂಕ್ ಆಫ್ ಬರೋಡಾ ಹಾಗೂ ಸಂಪೂರ್ಣ ನಷ್ಟದಲ್ಲಿರುವ ದೇನಾ ಬ್ಯಾಂಕ್ನೊಂದಿಗೆ ಲಾಭದಲ್ಲಿರುವ ವಿಜಯ ಬ್ಯಾಂಕ್ನ್ನು ವಿಲೀನಗೊಳಿಸಿರುವ ಪ್ರಕ್ರಿಯೆ ಗಮನಿಸಿದಾಗ ಇಲ್ಲಿ ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟ ಉದ್ಯಮಿಗಳ ರಕ್ಷಣೆ ಸ್ಪಷ್ಟವಾಗಿ ಕಾಣುತ್ತದೆ. ನರಸಿಂಹನ್ ಕಮಿಟಿಯು ಹೇಳಿದಂತೆ ಗ್ರಾಮೀಣ ಪ್ರದೇಶಗಳ ಜನರು ಮತ್ತು ಕೃಷಿಕರಿಗೆ ಬೆಂಬಲವಾಗಿದ್ದ ವಿಜಯ ಬ್ಯಾಂಕ್ ಉಳಿಸಲು ಆದ್ಯತೆ ನೀಡಬೇಕಿತ್ತು. ಆದರೆ ಕೆಲವೇ ಉದ್ಯಮಿಗಳ ರಕ್ಷಣೆಗಾಗಿ ವಿಜಯ ಬ್ಯಾಂಕನ್ನು ಬಲಿ ಕೊಡಲಾಯಿತು ಎಂದು ಅವರು ಹೇಳಿದರು.

ವಿಜಯ ಬ್ಯಾಂಕ್ ವಿಲೀನವನ್ನು ದ.ಕ. ಜಿಲ್ಲೆಯ ಎಲ್ಲರೂ ವಿರೋಧ ವ್ಯಕ್ತಪಡಿಸಿದರೂ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಇದನ್ನು ಗಂಭೀರವಾಗಿ ಸ್ವೀಕರಿಸಲೇ ಇಲ್ಲ. ಅವರಿಗೆ ಒಬ್ಬರಿಗೆ ಈ ಬಗ್ಗೆ ಮಾತನಾಡಲು ಸಾಧ್ಯವಿಲ್ಲದಿದ್ದರೆ ಈ ಬಗ್ಗೆ ಬ್ಯಾಂಕಿಂಗ್ ಕ್ಷೇತ್ರದ ಪರಿಣಿತರ, ಸಾರ್ವಜನಿಕರ, ಜಿಲ್ಲೆಯ ಗಣ್ಯ ವ್ಯಕ್ತಿಗಳ ಸಭೆ ನಡೆಸಿ ಕೇಂದ್ರಕ್ಕೆ ಬ್ಯಾಂಕ್ ಉಳಿಸಬೇಕೆಂಬ ಮನವಿ ಸಲ್ಲಿಸಬಹುದಿತ್ತು. ಆದರೆ ಅವರು ಬ್ಯಾಂಕ್ ಉಳಿಸಲು ಯಾವುದೇ ಪ್ರಯತ್ನ ಮಾಡದೆ ತಟಸ್ಥರಾಗಿ ಉಳಿದಿರುವುದರಿಂದ ಈ ಸಲದ ಲೋಕಸಭಾ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಹಾಬಲ ಮಾರ್ಲ ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English