ಬಂಟ್ವಾಳ : ಅಸೌಖ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗುವ ವೇಳೆ ಸಹೋದರಿಯರಿಬ್ಬರು ಮೃತಪಟ್ಟ ಘಟನೆ ಸೋಮವಾರ ಸಂಜೆ ಸಜೀಪದಲ್ಲಿ ನಡೆದಿದೆ.
ಕಾರು ಹಾಗೂ ರಿಕ್ಷಾದ ನಡುವೆ ಮುಖಾಮುಖಿ ಡಿಕ್ಕಿಯಾಗಿ ರಿಕ್ಷಾದಲ್ಲಿದ್ದ ಮಂಚಿ ನಿವಾಸಿಗಳಾದ ಜೈನಾಬಾ(45) ಹಾಗೂ ಜೋಹರಾ(55) ಮೃತಪಟ್ಟ ಮಹಿಳೆಯರು.
ಮಂಚಿ ನಿವಾಸಿಗಳಾದ ಈ ಸಹೋದರಿಯರು ಆಸ್ಪತ್ರೆಗೆ ಹೋಗುವ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಜೋಹರಾರವರ ಅಸೌಖ್ಯದ ಹಿನ್ನೆಲೆಯಲ್ಲಿ ಜೈನಾಬಾ ಅವರು ಮಂಚಿಯಿಂದ ರಿಕ್ಷಾ ಬಾಡಿಗೆಗೆಪಡೆದುಕೊಂಡು ಚೇಲೂರಿಗೆ ವೈದ್ಯರ ಬಳಿ ತೆರಳುತ್ತಿದ್ದರು.
ಈ ಸಂದರ್ಭ ಸಜೀಪ ಪಡು ಗ್ರಾಮದ ಕಂಚಿಲ ಎಂಬಲ್ಲಿ ಕಾರೊಂದು ವೇಗವಾಗಿ ಇನ್ನೊಂದು ವಾಹನವನ್ನು ಒವರ್ ಟೇಕ್ ಮಾಡುವ ಭರದಿಂದ ನಿಯಂತ್ರಣ ಕಳೆದುಕೊಂಡು ಸಜೀಪ ಕಡೆಯಿಂದ ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದ್ದು ರಿಕ್ಷಾ ಪಲ್ಟಿಯಾಗಿದೆ. ರಿಕ್ಷಾದಲ್ಲಿದ್ದ ಅಕ್ಕ ತಂಗಿಯರು ತೀವ್ರ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದರು.
ತಕ್ಷಣ ಅವರನ್ನು ಮಂಗಳೂರು ಆಸ್ಪತ್ರೆಗೆ ರವಾನಿಸಲಾಯಿತಾದರೂ ರಸ್ತೆ ಮಧ್ಯೆ ಇವರು ಅಸುನೀಗಿದ್ದಾರೆ ಎಂದು ತಿಳಿದುಬಂದಿದೆ. ರಿಕ್ಷಾ ಚಾಲಕ ಆಶ್ರಫ್ ಹಾಗೂ ಕಾರು ಚಾಲಕ ಮಹಮ್ಮದ್ ಸಿರಾಜ್ ಕೂಡಾ ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್ಐ ಮಂಜುನಾಥ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Click this button or press Ctrl+G to toggle between Kannada and English