ಪುಂಜಾಲಕಟ್ಟೆ : ಇಸ್ಪೀಟ್ ಚಟಕ್ಕೆ ಬಿದ್ದ ತನ್ನ ಮನೆಯಿಂದಲೇ ಕಳ್ಳತನವೆಸಗಿ ಆತನೇ ಪೊಲೀಸರ ಅತಿಥಿಯಾದ ಘಟನೆ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ ಗಂಪದಡ್ಡದಲ್ಲಿ ನಡೆದಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏ.19ರಂದು ಸಾದಿಕ್ (30) ಎಂಬಾಂತ ಪೊಲೀಸರಿಗೆ ದೂರು ನೀಡಿದ್ದ. ಅಂದು ಯೂಸುಬ್ ಬ್ಯಾರಿಯ ಮನೆಯವರು ಹಾಗೂ ಸಂಬಂಧಿಕರಾದ ನೆರೆಮನೆಯವರು ವಿವಾಹ ಸಮಾರಂಭದಲ್ಲಿ ಭಾಗವಹಿಸಲು ತೆರಳಿದ್ದರು. ಆದರೆ ಸಂಜೆ ವೇಳೆಗೆ ಮನೆಗೆ ಹಿಂದಿರುಗಿದಾಗ ಮನೆಯಲ್ಲಿ ಕಳ್ಳತನವಾಗಿರುವುದು ಕಂಡುಬಂದಿದೆ. ಕಪಾಟನ್ನು ಒಡೆದು ಒಳಗಿದ್ದ ಚಿನ್ನದ ಒಡವೆಗಳು ಹಾಗೂ ನಗದನ್ನು ಕಳವು ಮಾಡಲಾಗಿತ್ತು.
ಇಸ್ಪೀಟ್ ಚಟಕ್ಕೆ ಬಿದ್ದು ಸಾಕಷ್ಟು ಸಾಲ ಮಾಡಿಕೊಂಡಿದ್ದ ಸಾದಿಕ್ ಇದನ್ನು ತೀರಿಸಲು ತನ್ನ ಮನೆಯಲ್ಲಿ ತಾನೇ ಕದ್ದು ಪೋಲೀಸರ ಎದುರು ನಾಟಕವಾಡಿದ್ದ. ಪೊಲೀಸರು ವಿಚಾರಣೆ ನಡೆಸಿದಾಗ ಆತ ತಪ್ಪು ಒಪ್ಪಿಕೊಂಡಿದ್ದಾನೆ.
ಆತ ಕಳವು ಮಾಡಿದ್ದ 62 ಗ್ರಾಂ ತೂಕದ ಚಿನ್ನಾಭರಣ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದ ತನಿಖೆ ನಡೆಸಿದ ದ.ಕ. ಎಸ್‌ಪಿ ಲಕ್ಷ್ಮೀ ಪ್ರಸಾದ್, ಅಡಿಷನಲ್ ಎಸ್‌ಪಿ ವಿಕ್ರಮ್ ಅಮಟೆ ಮತ್ತು ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸೈದುಲ್ ಅದಾವತ್ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್‌ಕುಮಾರ್ ಮತ್ತು ಪುಂಜಾಲಕಟ್ಟೆ ಎಸ್‌ಐ ಕೆ.ಆರ್. ಸುನೀತಾ ಅವರ ತಂಡ ಕಾರ್ಯಾಚರಣೆ ನಡೆಸಿತ್ತು.
Click this button or press Ctrl+G to toggle between Kannada and English