ಮಂಗಳೂರು : ಕೊಕ್ಕಡ ಗ್ರಾಪಂ ಅಧ್ಯಕ್ಷ ವಿ.ಜೆ.ಸೆಬಾಸ್ಟಿಯನ್ ಅವರ ಅಧ್ಯಕ್ಷ ಸ್ಥಾನ ಮತ್ತು ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ಹಾಗೂ ಉಪ ನಿರ್ದೇಶಕ ಮುಬಾರಕ್ ಅಹ್ಮದ್ ಆದೇಶ ಹೊರಡಿಸಿದ್ದಾರೆ.
2017-18ನೇ ಸಾಲಿನಲ್ಲಿ ನಡೆಸಿರುವ ವಿವಿಧ ಕಾಮಗಾರಿಗಳ ಹಣಕಾಸು ಮಂಜೂರು ಮಾಡಲು ಗುತ್ತಿಗೆದಾರ ಉಮರ್ ಅಲಿಯಾಸ್, ಇಬ್ರಾಹೀಂ ಎಂಬವರಿಗೆ 50 ಸಾವಿರ ರೂ. ಲಂಚ ನೀಡುವಂತೆ ವಿ.ಜೆ.ಸೆಬಾಸ್ಟಿಯನ್ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ 20 ಸಾವಿರ ರೂ. ಸೆಬಾಸ್ಟಿಯನ್ಗೆ ನೀಡಲಾಗಿತ್ತು. ಉಳಿದ ಹಣವನ್ನು ಸೆಬಾಸ್ಟಿಯನ್ ಸೂಚನೆ ಮೇರೆಗೆ ಪಿಡಿಒ ಪುರುಷೋತ್ತಮ್ ಎಂಬವರು 2018ರ ಫೆ.5 ರಂದು ಹಣ ಸ್ವೀಕರಿಸುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಸಂದರ್ಭ ಸೆಬಾಸ್ಟಿಯನ್ ಹಾಗೂ ಪುರುಷೋತ್ತಮ್ರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಅವರು ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದರು.
ಇದೀಗ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ವಿ.ಜೆ.ಸೆಬಾಸ್ಟಿಯನ್ ಅವರ ಅಧ್ಯಕ್ಷ ಸ್ಥಾನ ಮತ್ತು ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
Click this button or press Ctrl+G to toggle between Kannada and English