ಅಟೋ ರಿಕ್ಷಾಗಳಲ್ಲಿ ಮಿತಿ ಮೀರಿ ಮಕ್ಕಳ ಸಾಗಾಟ ಕ್ರಮ
9:23 PM, Friday, May 17th, 2019
Loading...
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಕಾರ್ಖಾನೆಗಳಿದ್ದು, ಬಹಳ ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ವ್ಯವಸ್ಥಾಪಕರು ವಾಹನ ವ್ಯವಸ್ಥೆ ಮಾಡಿದ್ದಾರೆಯೇ? ಅಥವಾ ಇವರಿಗೆ ಸಮರ್ಪಕ ಬಸ್ ವ್ಯವಸ್ಥೆ ಇದೆಯೇ, ಇಲ್ಲದಿದ್ದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ನಿಯೋಜಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಲವು ಜಿಲ್ಲೆಗಳಲ್ಲಿ ಕಾರ್ಮಿಕರನ್ನು ಲಾರಿ, ಟ್ಯಾಕ್ಟರ್ ಗಳಲ್ಲಿ ತುಂಬಿಸಿಕೊಂಡು ಸಾಗಾಣಿಕೆ ಮಾಡಲಾಗುತ್ತಿದೆ. ಇದನ್ನು ತಡೆಯಬೇಕು. ಈ ಬಗ್ಗೆ ಕಾರ್ಮಿಕ ಇಲಾಖೆ ಜನ ಜಾಗೃತಿ ಕಾರ್ಯಕ್ರಮಗಳನ್ನು, ಶಿಕ್ಷಣ ಇಲಾಖೆ, ಪ್ರಾಧೇಶಿಕ ಸಾರಿಗೆ ಇಲಾಖೆ, ಪೋಲಿಸ್ ಇಲಾಖೆ, ಹಾಗೂ ಇತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡು ಜನರಿಗೆ ತಿಳುವಳಿಕೆ ಮೂಡಿಸಬೇಕು. ಎಂದು ಬೆಂಗಳೂರು, ಕಾರ್ಮಿಕ ಇಲಾಖೆಯ ಆಯುಕ್ತ ಪಾಲಯ್ಯ ತಿಳಿಸಿದರು.
ಇವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸರಕು ಸಾಗಾಣಿಕೆ ವಾಹನಗಳಲ್ಲಿ ಮಾನವ ಸಾಗಾಣಿಕೆ ತಡೆ ಕುರಿತ ಸಮಾಲೋಚನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಸಮರ್ಪಕವಾಗಿರುವುದರಿಂದ ಇಲ್ಲಿ ಕಾರ್ಮಿಕರ ಸಾರಿಗೆ ಸಮಸ್ಯೆ ಉದ್ಬವಿಸುವುದಿಲ್ಲ. ವಿಶೇಷವಾಗಿ ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜವಳಿ ಉದ್ಯಮಗಳಲ್ಲಿ ದುಡಿಯುವ ಮಹಿಳೆಯರಿಗೆ ಸಮಸ್ಯೆ ಉಂಟಾಗುತ್ತಿದೆ. ಇದನ್ನು ಸರಿಪಡಿಸಲು ಇಲಾಖೆ ಅಧಿಕಾರಿಗಳು ಸಹಕರಿಸ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾನ್ ಮಿಸ್ಕಿತ್ ಜಿಲ್ಲೆಯಲ್ಲಿ ಅಟೋ ರಿಕ್ಷಾಗಳಲ್ಲಿ ಮಿತಿ ಮೀರಿ ಮಕ್ಕಳನ್ನು ಶಾಲೆಗಳಿಗೆ ತುಂಬಿಸಿಕೊಂಡು ಹೋಗುತ್ತಿರುವ ಬಗ್ಗೆ ಹಲವಾರು ದೂರುಗಳು ಬರುತ್ತಿದ್ದು, ಇಲಾಖೆ ಸಮರ್ಪಕ ಕ್ರಮಕೈಗೊಳ್ಳಲಾಗುತ್ತಿದೆ. ಕಾರ್ಮಿಕ ಸಾರಿಗೆ ಸಮಸ್ಯೆ ಕಂಡುಬಂದಿರುವುದಿಲ್ಲ. ಗೇರು ಬೀಜ ಕಾರ್ಖಾನೆಗಳಿಗೆ ಹೋಗುವ ಕಾರ್ಮಿಕರಿಗೆ ಸಾರಿಗೆ ಸಮಸ್ಯೆ ಇದ್ದಲ್ಲಿ ಬಗೆಹರಿಸಲಾಗುವುದು. ಎಂದರು
ಸಭೆಯಲ್ಲಿ ಹಾಸನ, ಉಪ ಕಾರ್ಮಿಕ ಆಯುಕ್ತ ವೆಂಕಟೇಶ್ ಎ ಶಿಂದಿಕಟ್ಟೆ, ಮಂಗಳೂರು, ಸಹಾಯಕ ಆಯುಕ್ತ ಕೆ ಬಿ ನಾಗರಾಜ್, ಚಿಕ್ಕಮಗಳೂರು ಸಹಾಯಕ ಆಯುಕ್ತ ಜಾನ್ಸನ್ ಕೆ.ಜೆ, ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಹೆಚ್ ಎಂ ಎಸ್ ಯೂನಿಯನ್ ಅಧ್ಯಕ್ಷ ರಫೀಕ್, ಸಿ ಐ ಟಿ ಯು ಅಧ್ಯಕ್ಷ ವಸಂತ ಪೂಜಾರಿ, ಜಿಲ್ಲಾ ಪೋಲಿಸ್ ಅಧಿಕಾರಿಗಳು ಹಾಗೂ ಕೆ ಎಸ್ ಆರ್ ಟಿ ಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಉಪಸ್ಥಿತರಿದ್ದರು.