ಮಂಗಳೂರು : ರಾಜ್ಯ ಹೈಕೋರ್ಟ್‌ನ ಆದೇಶದಂತೆ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಿಐಟಿಯು ದ.ಕ. ಜಿಲ್ಲಾ ಸಮಿತಿಯು ಮಂಗಳವಾರ ಕದ್ರಿಯಲ್ಲಿರುವ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯ ಎದುರು ಧರಣಿ ನಡೆಸಿತು.
ಹೈಕೋರ್ಟ್ ಆದೇಶದಂತೆ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕು, ಸ್ಕೀಮ್ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನೂ ಕನಿಷ್ಠ ಕೂಲಿ ವ್ಯಾಪ್ತಿಗೆ ಒಳಪಡಿಸಬೇಕು, ತಂದೆ ತಾಯಿಗಳನ್ನೊಳಗೊಂಡು 5 ಘಟಕಗಳ ಆಧಾರದಲ್ಲಿ ಕನಿಷ್ಠ ಕೂಲಿ ರೂ.18,000/- ನಿಗದಿಗೊಳಿಸಬೇಕು, ಬೆಲೆಯೇರಿಕೆ ಸೂಚ್ಯಾಂಕ ನಿಗದಿಯಲ್ಲಿನ ಮೋಸ ನಿಲ್ಲಿಸಬೇಕು,10 ರೂ.ಇದ್ದ ಕಾರ್ಮಿಕ ಸಂಘದ ನೊಂದಣಿ ಶುಲ್ಕವನ್ನು ರೂ.1000/-ಕ್ಕೆ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು,ಕಾರ್ಮಿಕ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಕೂಡಲೇ ನೇಮಕಾತಿಗೊಳಿಸಬೇಕು ಹಾಗೂ ಬೀಡಿ ಕಾರ್ಮಿಕರಿಗೆ ಬಾಕಿಯಿರಿಸಿದ ಕನಿಷ್ಟ ಕೂಲಿ-ತುಟ್ಟಿಭತ್ತೆಯನ್ನು ನೀಡಬೇಕೆಂದು ಒತ್ತಾಯಿಸಿ, ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.
ಸುಮಾರು 200 ಕ್ಕೂ ಮಿಕ್ಕಿದ ವಿವಿಧ ವಿಭಾಗದ ಕಾರ್ಮಿಕರು, “ಹೈಕೋರ್ಟ್ ಆದೇಶದಂತೆ ಕನಿಷ್ಠ ಕೂಲಿ ಜಾರಿಯಾಗಲಿ, ತಂದೆ ತಾಯಿ ಸೇರಿದಂತೆ 5 ಘಟಕಗಳ ಆಧಾರದಲ್ಲಿ ಕನಿಷ್ಠ ಕೂಲಿ ರೂ. 18,000 ನಿಗದಿಯಾಗಲಿ,ಬೆಲೆಯೇರಿಕೆ ಸೂಚ್ಯಾಂಕದಲ್ಲಿನ ಮೋಸವನ್ನು ನಿಲ್ಲಿಸಿರಿ” ಎಂಬಿತ್ಯಾದಿ ಘೋಷಣೆಗಳನ್ನು ಕೂಗಿದರು.ಬಳಿಕ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ಘಾಟಿಸಿದ CITU ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಮಾತನಾಡುತ್ತಾ, *ಕಳೆದ ಹಲವಾರು ದಶಕಗಳಿಂದ ಕಾರ್ಮಿಕ ವರ್ಗ ಕನಿಷ್ಠ ಕೂಲಿಗಾಗಿ ನಡೆಸಿದ ಸಮರಧೀರ ಹೋರಾಟದ ಫಲವಾಗಿ 2016-17ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರಕಾರವು ಕನಿಷ್ಠ ವೇತನವನ್ನು ಪರಿಷ್ಕರಿಸಲು ಮಾಲೀಕರು,ಕಾರ್ಮಿಕರು, ಸರಕಾರದ ಸಮಸಂಖ್ಯೆಯ ಪ್ರತಿನಿಧಿಗಳನ್ನೊಳಗೊಂಡ ಕನಿಷ್ಠ ಕೂಲಿ ಸಲಹಾ ಮಂಡಳಿಯಲ್ಲಿ ಚರ್ಚಿಸಿದ ನಂತರ ಸರಕಾರಕ್ಕೆ ಶಿಫಾರಸು ಮಾಡಿತ್ತು.ಈ ಶಿಫಾರಸ್ಸಿನ ಆಧಾರದಲ್ಲಿ ಸರಕಾರ ಕರಡು ಅಧಿಸೂಚನೆಯನ್ನು ಹೊರಡಿಸಿ,ಆಕ್ಷೇಪಗಳನ್ನು ಸ್ವೀಕರಿಸಿ ನಂತರ ಅಂತಿಮ ಅಧಿಸೂಚನೆಗಳನ್ನು ಹೊರಡಿಸಿತ್ತು.ಇದರ ವಿರುದ್ದ ಸುಮಾರು 1700ರಷ್ಟು ಮಾಲೀಕರು ಹಾಗೂ ಮಾಲೀಕರ ಸಂಘಗಳು ರಾಜ್ಯ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.2-3 ವರ್ಷಗಳ ಕಾಲ ಹೈಕೋರ್ಟ್ ನಲ್ಲಿ ವಾದ ವಿವಾದಗಳನ್ನು ಆಲಿಸಿದ ನಂತರ ಗೌರವಾನ್ವಿತ ನ್ಯಾಯಮೂರ್ತಿ ಗಳಾದ ಕ್ರಷ್ಣ ದೀಕ್ಷಿತ್ ರವರ ಪೀಠವು 37 ವಿವಿಧ ಶೆಡ್ಯೂಲ್ ಕೈಗಾರಿಕೆಗಳಿಗೆ ರಾಜ್ಯ ಸರಕಾರ ನಿಗದಿಗೊಳಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಎತ್ತಿ ಹಿಡಿದಿರುವುದಲ್ಲದೆ, ಅಧಿಸೂಚನೆಯ ದಿನಾಂಕದಿಂದಲೇ 6% ಬಡ್ಡಿಯೊಂದಿಗೆ ಬಾಕಿಯನ್ನು 8 ವಾರಗಳೊಳಗೆ ಸಂದಾಯ ಮಾಡುವಂತೆಯೂ ಆದೇಶಿಸಿದೆ.ಒಟ್ಟಿನಲ್ಲಿ ಹೈಕೋರ್ಟ್ ನ ಈ ತೀರ್ಪಿನಿಂದಾಗಿ ಅಂಗಡಿ,ವಾಣಿಜ್ಯ ಸಂಸ್ಥೆಗಳು,ಅಟೋಮೊಬೈಲ್,ಆಸ್ಪತ್ರೆ,ನರ್ಸಿಂಗ್ ಹೋಂಗಳು, ಟೈಲರಿಂಗ್, ಹಾಸ್ಟೆಲ್, ಸೆಕ್ಯೂರಿಟಿ, ಹೋಟೇಲ್, ಬೇಕರಿಗಳು, ಇಟ್ಟಿಗೆ,ಮರದ ಕೆಲಸ,ಗ್ಲಾಸ್ ಮುಂತಾದ 37 ವಿವಿಧ ಕೈಗಾರಿಕೆಗಳ ಖಾಯಂ-ಗುತ್ತಿಗೆ-ತಾತ್ಕಾಲಿಕ-ಬದಲಿ-ಹೊರಗುತ್ತಿಗೆ ಕಾರ್ಮಿಕರೆಲ್ಲರಿಗೂ ತಮ್ಮ ಮೂಲವೇತನವನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ.ಇದು ರಾಜ್ಯದ ಕಾರ್ಮಿಕ ವರ್ಗದ ಹೋರಾಟಕ್ಕೆ ಸಂದ ಜಯ* ಎಂದು ಕಾರ್ಮಿಕ ವರ್ಗವನ್ನು ಶ್ಲಾಘಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ CITU ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು, *ಕೇಂದ್ರ ಹಾಗೂ ರಾಜ್ಯ ಸರಕಾರಗಳ ತಪ್ಪು ಆರ್ಥಿಕ ನೀತಿಗಳಿಂದಾಗಿ ವಿಪರೀತ ಬೆಲೆಯೇರಿಕೆಯಾಗುತ್ತಿದ್ದು, ಮತ್ತೊಂದು ಕಡೆ ದುಡಿಮೆಗೆ ತಕ್ಕ ಪ್ರತಿಫಲವಿಲ್ಲದೆ ಕಾರ್ಮಿಕರು ಜೀವನ ನಡೆಸುವುದೇ ಕಷ್ಟಕರವಾಗಿದೆ.ಮಾತ್ರವಲ್ಲದೆ ಬೆಲೆಯೇರಿಕೆ ಸೂಚ್ಯಾಂಕದಲ್ಲಿ ಮಾರುಕಟ್ಟೆ ಬೆಲೆಯನ್ನು ಗಣನೆಗೆ ತೆಗೆದುಕೊಳ್ಳುವ ಬದಲು ಸಗಟು ವ್ಯಾಪಾರದ ಬೆಲೆಯನ್ನು ಅಂದಾಜಿಸುವ ಮೂಲಕ ಕಾರ್ಮಿಕರಿಗೆ ಮಹಾಮೋಸವನ್ನು ಮಾಡಲಾಗುತ್ತಿದೆ. ಸ್ಕೀಂ ನೌಕರರಾದ ಆಶಾ, ಬಿಸಿಯೂಟ,ಅಂಗನವಾಡಿ ಕಾರ್ಯಕರ್ತೆಯರನ್ನು ಕೂಡ ಕನಿಷ್ಠ ವೇತನ ಕಾಯಿದೆಯಡಿಯಲ್ಲಿ ತರಬೇಕಾಗಿದೆ.ಪ್ರತಿಯೊಬ್ಬ ಕಾರ್ಮಿಕನಿಗೂ ಸಂಘ ಕಟ್ಟುವ ಹಕ್ಕಿದ್ದರೂ,ಅದನ್ನು ತಡೆಯುವ ಸಲುವಾಗಿ ಕಾರ್ಮಿಕ ಸಂಘದ ಈಗಿದ್ದ ರೂ.10 ನೋಂದಣಿ ಶುಲ್ಕವನ್ನು ರೂ.1000ಕ್ಕೆ ಏರಿಸುವ ಮೂಲಕ ಕಾರ್ಮಿಕರ ಒಗ್ಗಟ್ಟನ್ನು ಮುರಿಯಲು ಆಳುವ ವರ್ಗಗಳು ಪಿತೂರಿ ನಡೆಸುತ್ತಿದೆ* ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, *ಸಮಾಜದಲ್ಲಿ ಸಂಪತ್ತನ್ನು ಸ್ರಷ್ಠಿಸುವ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡಬೇಕಾದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರಂತರವಾಗಿ ಮಾಲೀಕರ ಪರವಾದ ನೀತಿಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಕನಿಷ್ಠ ಕೂಲಿಯನ್ನು ಲೆಕ್ಕ ಹಾಕುವಾಗ ಕಾರ್ಮಿಕ,ಹೆಂಡತಿ,ಮಕ್ಕಳು ಸೇರಿದಂತೆ 3 ಘಟಕಗಳಾಗಿ ಪರಿಗಣಿಸಬೇಕೆಂದಿದ್ದರೂ ಮಾಲೀಕರು ಮಾತ್ರ ಹೆಂಡತಿ ದುಡಿಯುತ್ತಿರುವುದರಿಂದ ಅವಳನ್ನು ಸೇರಿಸಬಾರದೆಂದು ನ್ಯಾಯಾಲಯದಲ್ಲಿ ವಾದಿಸಿರುವುದು ತೀರಾ ನಾಚಿಕೆಗೇಡಿನ ಸಂಗತಿಯಾಗಿದೆ. ಆದರೆ ಸುಪ್ರೀಂ ಕೋರ್ಟ್ ನ ತೀರ್ಪಿನನ್ವಯ ಹೆತ್ತವರನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಳಳಾದ್ದರಿಂದ ತಂದೆ ತಾಯಿಯನ್ನು ಸೇರಿಸಿ 5 ಫಟಕಗಳನ್ನಾಗಿ ಮಾಡಬೇಕೆಂಬ ಕಾರ್ಮಿಕ ವರ್ಗದ ಬೇಡಿಕೆ ವಾಸ್ತವ ಸತ್ಯವನ್ನು ಪ್ರತಿಪಾದಿಸಿದೆ.ರಾಜ್ಯ ಸರಕಾರವು ಅಂಬೇಡ್ಕರ್ ಸಹಾಯ ಹಸ್ತ ಯೋಜನೆಯಡಿಯಲ್ಲಿ ಮನೆಕೆಲಸಗಾರರು,ಟೈಲರ್ ಗಳು,ಮೆಕ್ಯಾನಿಕ್,ಹಮಾಲಿ ಕಾರ್ಮಿಕರು,ಕ್ಷೌರಿಕರು,ಚಿಂದಿ ಆಯುವವರು, ಹಾಗೂ ಚಾಲಕರಿಗೆ ಸ್ಮಾರ್ಟ್ ಕಾರ್ಡ್ ನೀಡುವುದಾಗಿ ಅರ್ಜಿ ಪಡೆದು ವರ್ಷ ಕಳೆದರೂ ಇನ್ನೂ ಕಾರ್ಡ್ ನೀಡದೇ ಇರುವುದು ಸರಕಾರದ ದಿವ್ಯನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ* ಎಂದು ಹೇಳಿದರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ *ಯು.ಬಿ.ಲೋಕಯ್ಯ, ಸದಾಶಿವದಾಸ್, ಜಯಂತಿ.ಬಿ.ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಜಯಂತ ನಾಯಕ್, ಪದ್ಮಾವತಿ ಶೆಟ್ಟಿ, ವಸಂತ ನಡ, ರಾಮಣ್ಣ ವಿಟ್ಲ* ರವರು ಭಾಗವಹಿಸಿದ್ದರು.
ಹೋರಾಟದ ನೇತ್ರತ್ವವನ್ನು CITU ಮುಖಂಡರಾದ *ಶಿವಕುಮಾರ್, ಜಯಲಕ್ಷ್ಮಿ,ಭಾರತಿ ಬೋಳಾರ,ಬಾಬು ದೇವಾಡಿಗ,ವಸಂತಿ ಕುಪ್ಪೆಪದವು,ಅಹಮ್ಮದ್ ಭಾವ* ಮುಂತಾದವರು ವಹಿಸಿದ್ದರು.
ಸಿಐಟಿಯು ಮುಖಂಡರಾದ ವಸಂತ ಆಚಾರಿ, ಬಾಲಕೃಷ್ಣ ಶೆಟ್ಟಿ, ಸುನೀಲ್ ಬಜಾಲ್, ಲೋಕಯ್ಯ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
Click this button or press Ctrl+G to toggle between Kannada and English