ಮಂಗಳೂರು : ರಾಜ್ಯ ಬಿಜೆಪಿ ಯುವಮೋರ್ಚಾ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಮಂಗಳವಾರ ನಡೆದ ಬೃಹತ್ ಯುವ ಜಾಗೃತಿ ಸಮಾವೇಶವನ್ನು ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಅನುರಾಧ್ ಠಾಕೂರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ವಿಶೇಷ ಅಹ್ವಾನಿತರಾಗಿದ್ದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ ದೇಶ 60 ವರ್ಷಗಳ ಅನಂತರ ಇನ್ನೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಜ್ಜಾಗಿದೆ. ವ್ಯಾಪಕ ಭ್ರಷ್ಟಾಚಾರ, ಭಯೋತ್ಪಾದನೆ, ಲವ್ ಜೆಹಾದ್, ನಕ್ಸಲ್, ಕಪ್ಪು ಹಣದಂತಹ ಸಮಸ್ಯೆಗಳಿಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳುವ ಇಚ್ಛಾಶಕ್ತಿ ಕೇಂದ್ರದ ಯುಪಿಎ ಸರಕಾರಕ್ಕೆ ಇಲ್ಲ. ಅಧಿಕಾರ ಉಳಿಸುವುದಕ್ಕಾಗಿ ಅಲ್ಪಸಂಖ್ಯಾಕರ ತುಷ್ಟೀಕರಣ ನೀತಿ ಮುಂದುವರಿದಿದೆ. ಭಯೋತ್ಪಾದಕರನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುವ ಆಘಾತಕಾರಿ ಸಂಗತಿಗಳು ನಡೆಯುತ್ತಿವೆ ಎಂದರು.
ರಾಜ್ಯದ ಯುವಜನರು ಶುದ್ಧ ರಾಜಕೀಯ ಜತೆಗೆ ಹೊಸ ರಾಜಕೀಯ ಪರ್ವಕ್ಕೆ ನಾಂದಿ ಹಾಡಲು ಮುಂದಾಗುವಂತೆ ಕರೆ ನೀಡಿದರು.
ಗ್ರಾಮ ಪಂಚಾಯತ್ ಮಟ್ಟದಿಂದ ಪ್ರಧಾನಿ ತನಕ ರಾಜಕಾರಣಿಗಳು ಅಂದರೆ ಹಾದಿ ತಪ್ಪಿ ನಡೆಯುವವರು ಎನ್ನುವ ಭಾವನೆ ಬಂದಿದೆ. ಸದೃಢ, ಸಶಕ್ತ ಭಾರತ ನಿರ್ಮಾಣ ದೃಷ್ಟಿಯಿಂದ ಶುದ್ಧ ಹಸ್ತದ, ಪ್ರಾಮಾಣಿಕ ಸ್ವಾಭಿಮಾನಿಗಳಿಂದ ಈ ದೇಶ ರೂಪುಗೊಳ್ಳಬೇಕಾಗಿದೆ ಎಂದವರು ತಿಳಿಸಿದರು.
ಉದ್ಘಾಟನಾ ಭಾಷಣ ಮಾಡಿದ ಠಾಕೂರ್ ಅವರು ನಿರುದ್ಯೋಗ, ಆತಂಕವಾದ, ಬೆಲೆ ಏರಿಕೆ, ಭ್ರಷ್ಟಾಚಾರ ದೇಶವನ್ನು ಆಳುತ್ತಿರುವ ಯುಪಿಎ ಕೊಡುಗೆಯಾಗಿದೆ. ಈ ಕರಾಳ ದಿನಗಳಿಂದ ಮುಕ್ತರಾಗುವ ಹಾಗೂ ವಾಜಪೇಯಿ, ಆಡ್ವಾಣಿಯಂತಹ ಸಚ್ಚಾರಿತ್ರ್ಯದ ರಾಷ್ಟ್ರ ನಾಯಕರ ಮುಂದಾಳತ್ವದ ಬಿಜೆಪಿ ನೇತೃತ್ವದ ಸರಕಾರ ದೇಶದಲ್ಲಿ ಅಧಿಕಾರಕ್ಕೆ ಬರುವ ಕಾಲ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಯುವಜನರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ದೇಶವನ್ನು ಲೂಟಿ ಮಾಡಿರುವುದೇ ಯುಪಿಎ ಸರಕಾರದ ಮುಖ್ಯ ಸಾಧನೆ. ಈ ಅವಧಿಯಲ್ಲಿ ಲಕ್ಷಾಂತರ ಕೋಟಿ ರೂ. ಅವ್ಯವಹಾರ ನಡೆದಿರುವುದು ಈಗ ಜಗಜ್ಜಾಹೀರು. ಯುವಜನತೆ ಈ ಕುರಿತು ಜಾಗೃತಿ ಹೊಂದುವುದು ಅವಶ್ಯ ಎಂದರು.
ಕೇಂದ್ರ ಸರಕಾರ ಮತಾಂತರ ನಡೆಸುವುದನ್ನು ತಡೆಯಲು ನಿರ್ದಿಷ್ಟ ಕಾನೂನು ರಚಿಸಬೇಕು ಮತ್ತು ಗೋಹತ್ಯೆ ನಿಷೇಧಿಸಲು ರಾಜ್ಯ ಸರಕಾರ ರೂಪಿಸುವ ಕಾನೂನು ಜಾರಿಗೆ ಅವಕಾಶ ಒದಗಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರು ಆಗ್ರಹಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ್ ಶೆಟ್ಟರ್, ಚಕ್ರವರ್ತಿ ಸೂಲಿಬೆಲೆ ಯುವ ಜಾಗೃತಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದರು.
ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲಿ ಗರಿಷ್ಠ ಅಂಕ ಪಡೆದ ಬಂಟ್ವಾಳದ ನವ್ಯಾ ಆರ್. ಶೆಟ್ಟಿ ಅವರನ್ನು ಮುಖ್ಯಮಂತ್ರಿಯವರು ಸಮ್ಮಾನಿಸಿದರು.
ಗೃಹ ಸಚಿವ ಆರ್. ಅಶೋಕ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ವೈದ್ಯಕೀಯ ಶಿಕ್ಷಣ ಸಚಿವ ರಾಮ್‌ದಾಸ್, ಸಮಾಜ ಕಲ್ಯಾಣ ಇಲಾಖೆ ಸಚಿವ ನಾರಾಯಣ ಸ್ವಾಮಿ, ಕರ್ನಾಟಕ ವಿಧಾನಸಭೆ ಉಪ ಸಭಾಧ್ಯಕ್ಷ ಎನ್. ಯೋಗೀಶ್ ಭಟ್, ಬಿಜೆಪಿ ರಾಜ್ಯ ವಕ್ತಾರ ಸಿ.ಟಿ. ರವಿ ಮುಂತಾದವರು ಉಪಸ್ಥಿತರಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು ಪ್ರಸ್ತಾವನೆಗೈದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಸ್ವಾಗತಿಸಿದರು. ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಕಿಶೋರ್ ಕುಮಾರ್ ಪುತ್ತೂರು ವಂದಿಸಿದರು.
Click this button or press Ctrl+G to toggle between Kannada and English