ಮಂಗಳೂರು : ನರೇಂದ್ರ ಮೋದಿಯವರ ಗೆಲುವಿನ ಹರ್ಷಾಚರಣೆ ದೇಶದಾದ್ಯಂತ ವಿವಿಧ ರೀತಿಯಲ್ಲಿ ನಡೆಯುತ್ತಿದೆ. ಪುತ್ತೂರಿನ ಮೋದಿ ಅಭಿಮಾನಿಯೊಬ್ಬರು ತಮ್ಮ ಒಂದು ದಿನದ ಕೆಲಸವನ್ನೇ ಮೋದಿ ಗೆಲುವಿಗಾಗಿ ಮುಡಿಪಾಗಿಟ್ಟಿದ್ದಾರೆ.
ಪುತ್ತೂರು ಸಮೀಪದ ಸಂಟ್ಯಾರುವಿನಲ್ಲಿ ಹೇರ್ ಸಲೂನ್ ನಡೆಸುತ್ತಿರುವ ಬಾಲಸುಂದರ್, ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿ. ಬೃಹತ್ ರಾಲಿ, ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ ಮೋದಿ ಗೆಲುವನ್ನು ಸಂಭ್ರಮಿಸುವ ಆರ್ಥಿಕ ತಾಕತ್ತು ಬಾಲಸುದರ್ ಅವರಿಗಿಲ್ಲ. ಈ ಕಾರಣಕ್ಕಾಗಿ ಇವರು ತಮ್ಮ ದುಡಿಮೆಯ ಒಂದು ದಿನವನ್ನು ಮೋದಿ ಗೆಲುವಿಗಾಗಿ ಸಮರ್ಪಿಸುವ ಮೂಲಕ ಮೋದಿ ಅವರ ಮೇಲೆ ಅಭಿಮಾನ ಮೆರೆದಿದ್ದಾರೆ.
ಒಂದು ವರ್ಷದ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಾಲಸುಂದರ್ ಗೆ ಆಸ್ಪತ್ರೆಯ ಬಿಲ್ ಹೊಂದಿಸಲೂ ಸಾಧ್ಯವಾಗಿರಲಿಲ್ಲ. ಆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದ ಆಯುಷ್ಮಾನ್ ಭಾರತ್ ಯೋಜನೆ ಬಾಲಸುಂದರ್ ಗೆ ವರದಾನವಾಗಿ ಬಂದಿತ್ತು.ಈ ಯೋಜನೆಯಡಿ ಚಿಕಿತ್ಸೆ ಪಡೆದ ಬಾಲಸಂದರ್ ಗುಣಮುಖರಾದರು. ಈ ಯೋಜನೆಯಿಂದ ಅವರ ಪ್ರಾಣ ಉಳಿದಿತ್ತು. ಆ ಸಂದರ್ಭದಲ್ಲಿ ಮೋದಿ ಮತ್ತೊಮ್ಮೆ ಪ್ರದಾನಿಯಾದರೆ ಒಂದು ದಿನದ ಕ್ಷೌರವನ್ನು ಉಚಿತವಾಗಿ ಮಾಡುವುದಾಗಿ ಸಂಕಲ್ಪ ತೊಟ್ಟಿದ್ದರು. ಇದೀಗ ತಮ್ಮ ನಿರ್ಧಾರವನ್ನು ಕಾರ್ಯರೂಪಕ್ಕೆ ತಂದು ಮೋದಿ ಅವರ ಗೆಲುವನ್ನು ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದ್ದಾರೆ.
ಬಾಲಸುಂದರ್ ಅವರ ಮೋದಿ ಭಕ್ತಿಯನ್ನು ಸಾರ್ವಜನಿಕರು ಶ್ಲಾಘಿಸಿದ್ದು, ಉಚಿತವಾಗಿ ಕ್ಷೌರವನ್ನೂ ಮಾಡಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English