ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 2ರಲ್ಲಿ ಬಿಜೆಪಿ ಪಾರಮ್ಯ ಮೆರೆದಿದೆ. ಒಂದರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಸುಳ್ಯ ನಗರ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಸುಳ್ಯ ನಗರ ಸಭೆ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ. ಮೂಡಬಿದ್ರೆ ಪುರಸಭೆ ಅಧಿಕಾರದ ಚುಕ್ಕಾಣಿ ಬಿಜೆಪಿ ಹಿಡಿದಿದ್ದು, ಮುಲ್ಕಿ ನಗರ ಪಂಚಾಯತ್ ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಸುಳ್ಯ ನಗರ ಪಂಚಾಯತ್ ನ 20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 14ರಲ್ಲಿ ಬಿಜೆಪಿ ಹಾಗು 4ರಲ್ಲಿ ಕಾಂಗ್ರೆಸ್, ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 14 ಸ್ಥಾನ ಗೆಲ್ಲುವುದರೊಂದಿಗೆ ಬಿಜೆಪಿ ಸುಳ್ಯ ನಗರ ಪಂಚಾಯತ್ ನ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸುಳ್ಯ ನಗರ ಪಂಚಾಯತ್ ನಲ್ಲಿ ಕಳೆದ ಬಾರಿಯೂ ಬಿಜೆಪಿ ಅಧಿಕಾರದಲ್ಲಿತ್ತು. ಈ ಬಾರಿಯೂ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಮೂಡಬಿದ್ರೆ ಪುರಸಭೆಯ 23 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12ರಲ್ಲಿ ಬಿಜೆಪಿ ಜಯಗಳಿಸಿದೆ. 11 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಮೂಡಬಿದ್ರೆ ಪುರಸಭೆಯಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಈ ಬಾರಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಮುಲ್ಕಿ ನಗರ ಪಂಚಾಯತ್ ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಮೂಲ್ಕಿ ನಗರ ಪಂಚಾಯತ್ ನ 18 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನಗಳಲ್ಲಿ ಜಯ ಗಳಿಸಿದರೆ, ಕಾಂಗ್ರೆಸ್ 9ರಲ್ಲಿ ಹಾಗು ಜೆಡಿಎಸ್ 1 ಸ್ಥಾನದಲ್ಲಿ ಜಯಗಳಿಸಿದೆ. ಆದರೆ ಬಿಜೆಪಿ ಸಂಸದ ಹಾಗು ಶಾಸಕರ ಮತ ಚಲಾವಣೆ ಆದಾಗ ಬಿಜೆಪಿ ಸಮಬಲ ಸಾಧಿಸಲಿದೆ. ಈ ಹಿನ್ನೆಲೆಯಲ್ಲಿ ಮುಲ್ಕಿ ನಗರ ಪಂಚಾಯತ್ ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ. ಕಳೆದ ಬಾರಿ ಇಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು.
Click this button or press Ctrl+G to toggle between Kannada and English