ಮಂಗಳೂರು: ಪುತ್ತೂರು ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿ ಅತ್ಯಾಚಾರ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಅಸ್ಸಾಂ ಮೂಲದ ಅಖ್ತರ್ ಹುಸೇನ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.
ಮಾರ್ಚ್ 9 ರಂದು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಬಾಲಕಿಯೋರ್ವಳನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಕೈಗೊಂಡಾಗ ಅಖ್ತರ್ ಹುಸೇನ್ ಅಪಹರಿಸಿದ ಬಗ್ಗೆ ಮಾಹಿತಿ ಸಿಕ್ಕಿತ್ತು. ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ಐ ಶಕ್ತಿವೇಲು ಅವರು ತಮ್ಮ ಸಿಬ್ಬಂದಿಯೊಂದಿಗೆ ಅಸ್ಸಾಂ ರಾಜ್ಯಕ್ಕೆ ತೆರಳಿದ್ದರು. ಈ ವೇಳೆ ಅಪಹರಣಕ್ಕೆ ಒಳಗಾದ ಬಾಲಕಿಯನ್ನು ಮಾರ್ಚ್ 17ರಂದು ಅಸ್ಸಾಂ ರಾಜ್ಯದ ಬೋಂಗಾಯಿಗಾಂವ್ ಎಂಬಲ್ಲಿ ಪತ್ತೆ ಮಾಡಿದ್ದರು. ಬಾಲಕಿಯನ್ನು ಪೋಷಕರಿಗೆ ಒಪ್ಪಿಸಿ, ಹೆಚ್ಚಿನ ತನಿಖೆ ಕೈಗೊಳ್ಳಲಾಗಿತ್ತು. ಈ ಸಂದರ್ಭ ಆರೋಪಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ವೈದ್ಯರಿಂದ ವರದಿ ಸಂಗ್ರಹಿಸಿ ಪ್ರಕರಣವನ್ನು ಅತ್ಯಾಚಾರ ಮತ್ತು ಪೊಕ್ಸೊ ಕಾಯ್ದೆಯಡಿ ಪೊಲೀಸರು ಮಾರ್ಪಡಿಸಿದ್ದರು. ಬಳಿಕ ಆರೋಪಿಯ ಪತ್ತೆಗೆ ತನಿಖೆ ಕೈಗೊಂಡ ಪೊಲೀಸರು, ನಿನ್ನೆ ಕೇರಳ ರಾಜ್ಯದ ನೆಟ್ಟಣಿಗೆ ಎಂಬಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
Click this button or press Ctrl+G to toggle between Kannada and English