ಮಂಗಳೂರು : ಬೋರ್‌ವೆಲ್ ಕೊಳವೆಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಬಂದಿದೆ ರೋಬೋಟ್

11:08 PM, Friday, June 7th, 2019
Share
1 Star2 Stars3 Stars4 Stars5 Stars
(No Ratings Yet)
Loading...

Robotಮಂಗಳೂರು : ಬೇಸಿಗೆಯಲ್ಲಿ ನೀರಿನ ಕೊರತೆ ನಿರ್ಮಾಣವಾಗುತ್ತಿದ್ದಂತೆ ಬೋರ್‌ವೆಲ್ ಕೊರೆಸುವುದು ಸರ್ವೇಸಾಮಾನ್ಯ. ಇಂದು ಬೇಕಾಬಿಟ್ಟಿ ಕೊಳವೆಬಾವಿ ಕೊರೆಸುವುದಕ್ಕೆ ತಡೆ ಒಡ್ಡುವ ಕಾನೂನುಗಳಿದ್ದರೂ ಅಧಿಕಾರಿಗಳ ಕಣ್ಣುತಪ್ಪಿಸಿ ಅಲ್ಲಲ್ಲಿ ಕೊಳವೆಬಾವಿ ತೋಡಿಸುತ್ತಾರೆ. ಕೆಲವಾರು ಬಾರಿ ದುರದೃಷ್ಟವಶಾತ್ ಕೊರೆಸಿದ ಬೋರ್‌ವೆಲ್‌ನಲ್ಲಿ ನೀರು ದೊರೆಯುವುದಿಲ್ಲ. ಈ ಸಮಯದಲ್ಲಿ ಆ ಬೋರ್‌ವೆಲ್ ಮುಚ್ಚುವ ಯಾವುದೇ ಕೆಲಸಕ್ಕೆ ಮಾಲೀಕರು ತೊಡಗುವುದಿಲ್ಲ. ಇಂತಹ ಕೊಳವೆಬಾವಿಗಳಿಗೆ ಸಣ್ಣಮಕ್ಕಳು ಬಲಿಯಾಗುವುದನ್ನು ನಾವು ಮಾಧ್ಯಮಗಳಲ್ಲಿ ಕೇಳಿದ್ದೇವೆ. ಇಂತಹ ಸಂದರ್ಭದಲ್ಲಿ ಈ ಮಕ್ಕಳನ್ನು ರಕ್ಷಿಸುವ ಸರಿಯಾದ ಸಾಧನಗಳು ಇರದೆ ಪರದಾಡುವಂತಾಗುತ್ತದೆ. ಈ ಸಮಸ್ಯೆಯನ್ನು ಮನಗಂಡ ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ರೋಬೋಟ್ ತಂತ್ರಜ್ಞಾನದ ಮೂಲಕ ರಕ್ಷಣಾಕಾರ್ಯ ನಡೆಸಲು ನೆರವಾಗುವ ಒಂದು ಸಾಧನವನ್ನು ಆವಿಷ್ಕರಿಸಿದ್ದಾರೆ.

ಮೆಕ್ಯಾನಿಕಲ್ ವಿಭಾಗದ ರುಪೆಲ್ ವೆಲನ್ ಗಾನ್ಸೇವ್ಸ್, ರಾಯ್ಡನ್ ಮಥಾಯ್ಸ್, ರಿಶೊನ್ ನೋಯೆಲ್ ಸಲ್ದಾನಾ ಹಾಗೂ ರಯಾನ್ ಅಲ್ತಫ್ ಕಾಜಿ ಎಂಬ ನಾಲ್ಕು ಮಂದಿ ಅಂತಿಮ ವರ್ಷದ ಬಿ.ಇ ವಿದ್ಯಾರ್ಥಿಗಳ ತಂಡವು ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಕೃಷ್ಣಪ್ರಸಾದ್ ಅವರ ಮಾರ್ಗದರ್ಶನದಲ್ಲಿ ರೋಬೋಟ್ ತಂತ್ರಜ್ಞಾನವನ್ನು ಬಳಸಿ ಕೊಳವೆಬಾವಿಗೆ ಬಿದ್ದ ಮಕ್ಕಳನ್ನು ರಕ್ಷಿಸುವ ಒಂದು ವಿನೂತನ ಸಾಧನವನ್ನು ತಯಾರಿಸಿದ್ದಾರೆ. ಈ ಸಲಕರಣವನ್ನು ತಯಾರಿಸುವಲ್ಲಿ ಡಿ.ಸಿ ಹಾಗೂ ಸರ್ವೋ ಮೋಟಾರ್ ಉಪಯೋಗಿಸಲಾಗಿದ್ದು ಲಾಂಗ್-ರೇಂಜ್ ಸಿಸಿ ಕ್ಯಾಮರಾದ ಮೂಲಕ ಮಗು ಸಿಲುಕಿಕೊಂಡ ಸ್ಥಳ ಹಾಗೂ ಅಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಬಹುದಾಗಿದೆ. ಈ ಯಂತ್ರದಲ್ಲಿ ಕಾಲುಗಳಂತಹ ಸ್ಟೀಲ್ ರಾಡುಗಳಿದ್ದು ಅದರ ಸಹಾಯದಿಂದ ಮಗುವನ್ನು ರಕ್ಷಿಸಬಹುದಾಗಿದೆ ಎಂದು ಪ್ರಾಜೆಕ್ಟ್ ತಯಾರಿಸಿದ ವಿದ್ಯಾರ್ಥಿಗಳು ವಿವರಿಸುತ್ತಾರೆ. ಈ ಯಂತ್ರವು ಮಾನವ ನಿಯಂತ್ರಿತ ಕಂಪ್ಯೂಟರೈಸ್ಡ್ ಸೇಫ್ಟಿ ಸಿಸ್ಟಮ್ ಆಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English