ಪೇಜಾವರ ಶ್ರೀಗಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ, ಜೂನ್ 10 ಕ್ಕೆ ಮತ್ತೆ ಸಭೆ

2:26 PM, Saturday, June 8th, 2019
Share
1 Star2 Stars3 Stars4 Stars5 Stars
(No Ratings Yet)
Loading...

Kukke-Mathಮಂಗಳೂರು : ಪೇಜಾವರ ಶ್ರೀಗಳು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜೂನ್ 7ರ ಸಂಜೆ ಭೇಟಿ ನೀಡಿ ಎರಡೂ ಕಡೆಯಿಂದ ಅಭಿಪ್ರಾಯ ಸಂಗ್ರಹಿಸಿದರೂ ಮತ್ತೆ ಭಿನ್ನಾಭಿಪ್ರಾಯ ಉಂಟಾಗಿದೆ. ಹಾಗಾಗಿ ಜೂನ್ 10ರ ಒಳಗೆ ಮತ್ತೊಮ್ಮೆ ಸಭೆ ಕರೆಯಲು ಸ್ವಾಮೀಜಿ ನಿರ್ಧರಿಸಿದ್ದಾರೆ.

ದಕ್ಷಿಣ ಭಾರತದ ಪವಿತ್ರ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಠ ಮತ್ತು ದೇವಸ್ಥಾನದ ನಡುವಿನ ತಿಕ್ಕಾಟ ಮುಂದುವರಿದಿದೆ. ಸರ್ಪ ಸಂಸ್ಕಾರ ವಿಚಾರದಲ್ಲಿ ಹಲವಾರು ವರ್ಷಗಳ ಕಾಲದ ಸಂಘರ್ಷಕ್ಕೆ ಮಂಗಳ ಹಾಡಲು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸಿದ ಹಿರಿಯ ಯತಿ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಯವರ ಸಂಧಾನ ವಿಫಲವಾಗಿದೆ.

ಜೂನ್ 7ರ ಸಂಜೆ ಕ್ಷೇತ್ರಕ್ಕೆ ಆಗಮಿಸಿದ ಪೇಜಾವರ ಸ್ವಾಮೀಜಿಯವರನ್ನು ದೇವಸ್ಥಾನದ ಆಡಳಿತ ಮಂಡಳಿ ಭವ್ಯವಾಗಿ ಸ್ವಾಗತಿಸಿದೆ. ನಂತರ ಸುಬ್ರಹ್ಮಣ್ಯನ ದರ್ಶನ ಪಡೆದ ಸ್ವಾಮೀಜಿ ಮೊದಲು ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಜೊತೆ ಗೌಪ್ಯ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಮುಖಂಡರೂ ಸ್ವಾಮೀಜಿಯ ಜೊತೆಗಿದ್ದು, ಮಠದ ಪರವಾದ ಅಭಿಪ್ರಾಯಗಳನ್ನು ಸಂಗ್ರಹಿಸಿದರು.

ಮಠದ ಜೊತೆಗಿನ ಚರ್ಚೆ ಬಳಿಕ ‌ಕ್ಷೇತ್ರದ ಕಚೇರಿಯಲ್ಲಿ ಎರಡೂ ಕಡೆಯವರನ್ನು ಕೂರಿಸಿ ಸಂಧಾನ ನಡೆಸಲು ಪೇಜಾವರ ಸ್ವಾಮೀಜಿ ಪ್ರಯತ್ನಿಸಿದ್ದಾರೆ. ಈ ವೇಳೆ ಎರಡೂ ಕಡೆಯ ನಾಯಕರಿಂದ ವಾದ ಪ್ರತಿವಾದ ನಡೆದಿದ್ದರಿಂದ ಪೇಜಾವರ ಶ್ರೀ ಸಂಧಾನ ಸಭೆ ಮೊಟಕುಗೊಳಿಸಿ ಜೂನ್ 10ರೊಳಗೆ ಮಂಗಳೂರಿನಲ್ಲಿ ಸಭೆ ಕರೆದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.

ಜೂನ್ 10 ರೊಳಗೆ ಮಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಮತ್ತು ಮಠದ ಮುಖಂಡರು ಬರಲು ಒಪ್ಪಿಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English