ವಿಧಾನಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ಗೆ ಸಚಿವ ಸ್ಥಾನ

2:05 PM, Monday, June 10th, 2019
Share
1 Star2 Stars3 Stars4 Stars5 Stars
(No Ratings Yet)
Loading...

BM Farooqಮಂಗಳೂರು: ಜೂ. 12ರಂದು ನಡೆಯುವ  ರಾಜ್ಯ ಸಂಪುಟ ವಿಸ್ತರಣೆಯಲ್ಲಿ ಜೆಡಿಎಸ್‌ ಕೋಟಾದಲ್ಲಿ ವಿಧಾನಪರಿಷತ್‌ ಸದಸ್ಯ ಹಾಗೂ ಜೆಡಿಎಸ್‌ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್‌ ಸಚಿವ ಸ್ಥಾನ ಸಿಗಲಿದೆ ಎಂದು ಹೇಳಲಾಗಿದೆ. ಇದರಿಂದಾಗಿ ಕರಾವಳಿಗೆ ಇನ್ನೊಂದು ಸಚಿವ ಸ್ಥಾನ ಸಾಧ್ಯತೆಗಳು ದಟ್ಟವಾಗಿವೆ. ಕಾಂಗ್ರೆಸ್‌ನಿಂದ ಮಂಗಳೂರು ಶಾಸಕ ಯು.ಟಿ. ಖಾದರ್‌ ಅವರು ಈಗಾಗಲೇ ಸಚಿವರಾಗಿದ್ದಾರೆ.

ಜೆಡಿಎಸ್‌ ಕೋಟಾದಲ್ಲಿ ಎರಡು ಸಚಿವರ ಸೇರ್ಪಡೆಗೆ ಅವಕಾಶವಿರುವುದರಿಂದ ಒಂದು ಸ್ಥಾನ ಪಕ್ಷೇತರರಿಗೆ ನೀಡಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದು ಇನ್ನೊಂದು ಸ್ಥಾನವನ್ನು ಅಲ್ಪಸಂಖ್ಯಾಕ ಸಮುದಾಯಕ್ಕೆ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ. ಪ್ರಸ್ತುತ ಸಚಿವ ಸಂಪುಟದಲ್ಲಿ ಜೆಡಿಎಸ್‌ನಿಂದ ಅಲ್ಪಸಂಖ್ಯಾಕರಿಗೆ ಪ್ರಾತಿನಿಧ್ಯ ದೊರಕಿಲ್ಲ. ಕಾಂಗ್ರೆಸ್‌ನಿಂದ ಯು.ಟಿ. ಖಾದರ್‌ ಹಾಗೂ ಜಮೀರ್‌ ಅಹಮ್ಮದ್‌ ಸಚಿವರಾಗಿದ್ದಾರೆ. ಈ ನೆಲೆಯಲ್ಲಿ ಬಿ.ಎಂ. ಫಾರೂಕ್‌ ಹೆಸರು ಚಾಲ್ತಿಯಲ್ಲಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೆಗೌಡ ಹಾಗೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಅಪ್ತರಾಗಿರುವ ಫಾರೂಕ್‌ ಪಕ್ಷ ಸಂಘಟನೆಯಲ್ಲಿ ನಿರಂತರ ಸಹಯೋಗ ನೀಡುತ್ತಾ ಬಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಚುನಾವಣಾ ಕಾರ್ಯತಂತ್ರ ರೂಪಿಸುವ ತಂಡದಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಮೈತ್ರಿ ಸರಕಾರ ರಚನೆ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿ ಅಲ್ಪಸಂಖ್ಯಾಕ ಸಮುದಾಯಕ್ಕೆ ಅವಕಾಶ ನೀಡುವ ನಿಟ್ಟಿನಲ್ಲೂ ಫಾರೂಕ್‌ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲು ದೇವೇಗೌಡ ಹಾಗೂ ಕುಮಾರ ಸ್ವಾಮಿ ಚಿಂತನೆ ನಡೆಸಿದ್ದರು. ಆದರೆ ಮೈತ್ರಿ ಪಕ್ಷಗಳ ನಡುವೆ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡುವ ಲೆಕ್ಕಾಚಾರದಲ್ಲಿ ಫಾರೂಕ್‌ಗೆ ಅವಕಾಶ ತಪ್ಪಿಹೋಗಿತ್ತು.

ಸುರತ್ಕಲ್‌ ಸಮೀಪದ ಕೃಷ್ಣಾಪುರದವರಾದ ಉದ್ಯಮಿ ಬಿ.ಎಂ. ಫಾರೂಕ್‌ ಅವರು ರಾಜ್ಯಸಭೆಗೆ ಹಾಗೂ ವಿಧಾನಪರಿಷತ್‌ಗೆ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಬಳಿಕ ಮೈತ್ರಿ ಸರಕಾರ ರಚನೆಯಾದ ಸಂದರ್ಭ ಜೆಡಿಎಸ್‌ ವತಿಯಿಂದ ವಿಧಾನಪರಿಷತ್‌ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.

ಜೆಡಿಎಸ್‌ನಲ್ಲಿ ಅಲ್ಪಸಂಖ್ಯಾಕರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಅಸಮಾಧಾನಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಫಾರೂಕ್‌ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದರೆ ಇದು ನಿವಾರಣೆಯಾಗಲಿದೆ ಎಂಬ ಅಂಶವೂ ಚರ್ಚೆಯ ವೇಳೆ ಪ್ರಸ್ತಾವನೆಗೆ ಬಂದಿದೆ ಎನ್ನಲಾಗಿದೆ.

ಜೆಡಿಎಸ್‌ನಲ್ಲಿ ಸಚಿವ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಹಾಗೂ ವಿಶ್ವನಾಥ್‌ ಹೆಸರುಗಳು ಕೂಡ ಪ್ರಸ್ತಾವನೆಯಲ್ಲಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English