ಮಂಗಳೂರು : ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಎದುರು ಸೋಮವಾರ ಬೆಳಿಗ್ಗೆ ಪ್ರತಿಭಟನಾ ಪ್ರದರ್ಶನ ನೆಡೆಯಿತು.
ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ ಸರಿಪಡಿಸದಿದ್ದರೆ ಸರಕಾರದ ವಿರುದ್ಧ ಪ್ರತಿಭಟನೆಯನ್ನು ಮತ್ತಷ್ಟೂ ತೀವ್ರಗೊಳಿಸುವುದಾಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಎಚ್ಚರಿಸಿದ್ದಾರೆ.
ಪ್ರಾಪರ್ಟಿ ಕಾರ್ಡ್ ಸಮಸ್ಯೆಯ ವಿರುದ್ಧ ಶಾಸಕರಾದ ವೇದವ್ಯಾಸ್ ಕಾಮತ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು, ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆಯಿಂದ ಜನ ಸಾಮಾನ್ಯರು ಅನುಭವಿಸುವ ಸಂಕಷ್ಟವನ್ನು ಸರಕಾರ, ಜಿಲ್ಲಾಡಳಿತದ ಗಮನಕ್ಕೆ ತಂದರೂ ಜಾಣ ಕಿವುಡು ಪ್ರದರ್ಶಿಸುತ್ತಿದೆ ಎಂದು ದೂರಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಆಸ್ತಿ ಪರಬಾರೆಗೆ ಪ್ರಾಪರ್ಟಿ ಕಾರ್ಡ್ ಅನ್ನು ಕಡ್ಡಾಯಗೊಳಿಸುವಾಗ ಸುಮಾರು 80% ಪ್ರಾಪರ್ಟಿ ಕಾರ್ಡ್ ಜನರಿಗೆ ವಿತರಿಸಲಾಗಿತ್ತು. ಆದರೆ ಮಂಗಳೂರಿನ ಜನತೆಯ ತಾಳ್ಮೆಯನ್ನು ಪರಿಶೀಲನೆ ಮಾಡಲು ಮತ್ತು ಇಲ್ಲಿನ ಜನರಿಗೆ ತೊಂದರೆ ಕೊಡುವ ಉದ್ದೇಶದಿಂದ ಸರ್ಕಾರ ಇದನ್ನು ಹೇರಿದೆ ಎಂದು ಕಿಡಿಕಾರಿದರು.
ಕಂದಾಯ ಸಚಿವರಿಗೂ ಕೂಡ ಈ ಕುರಿತು ಲಿಖಿತ ರೂಪದಲ್ಲಿ ಸಮಸ್ಯೆ ಬಗೆಹರಿಸಲು ಕೋರಿದ್ದೇನೆ. ಆದರೂ ಕೂಡ ಇದುವರೆಗೂ ಪ್ರಾಪರ್ಟಿ ಕಾರ್ಡ್ ಅವ್ಯವಸ್ಥೆ ಬಗೆಹರಿಸಲು ಸರಕಾರ ಮನಸ್ಸು ಮಾಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಮೂಲಕ ಸರಕಾರವನ್ನು ಎಚ್ಚರಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
Click this button or press Ctrl+G to toggle between Kannada and English