ಬಂಟ್ವಾಳ : ವೈರಲ್ ಆದ ಅಡಿಕೆ ಮರ ಹತ್ತುವ ಬೈಕ್ ವಿಡಿಯೋ

2:45 PM, Tuesday, June 11th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

areca ಬಂಟ್ವಾಳ :  ಬೈಕ್ ಮಾದರಿಯ ಯಂತ್ರದ ಮೂಲಕ ಅಡಿಕೆ ಮರ ಹತ್ತಿ ಕಾಯಿ ಕೀಳುವ ಬೈಕ್ ಬಂಟ್ವಾಳ ತಾಲೂಕಿನ ಪಣೋಲಿಬೈಲ್ ಸಮೀಪದ ಕೋಮಾಲಿ ಎಂಬಲ್ಲಿ  ಮರ ಹತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೋಮಾಲಿ ಎಂಬಲ್ಲಿರುವ ಪ್ರಗತಿಪರ ಕೃಷಿಕ ಗಣಪತಿ ಭಟ್ ಅವರು ನಿರ್ಮಿಸಿ ಪ್ರಾಯೋಗಿಕವಾಗಿ ತನ್ನ ಮನೆಯ ಸದಸ್ಯರು ಅದರಲ್ಲೂ ಮಹಿಳೆಯರು ಇದನ್ನು ಬಳಸಿದ ಸಂದರ್ಭ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಈಗ ಕೃಷಿಕರ ವಲಯದಲ್ಲಿ ವೈರಲ್ ಆಗಿದೆ.

ಈ ಬೈಕ್ ಮೂಲಕ ಯಾರ ಸಹಾಯವೂ ಇಲ್ಲದೆ ಅಡಕೆ ಮರ ಹತ್ತಲು ಈ ಯಂತ್ರವನ್ನು ಪರಿಷ್ಕರಿಸಿ, ತೆಂಗಿನ ಮರ ಹತ್ತುವಂತೆ ಮಾಡುವ ಯೋಜನೆಯೂ ಭಟ್ ಅವರಿಗಿದೆ.

ಇದು 28 ಕೆ.ಜಿ. ತೂಕವುಳ್ಳ ಪೆಟ್ರೋಲ್ ಚಾಲಿತ 2 ಸ್ಟ್ರೋಕ್ ಇಂಜಿನ್ ಇರುವ ಬೈಕ್ ಮಾದರಿಯ ಯಂತ್ರ. ಇದರಲ್ಲಿ ಹೈಡ್ರಾಲಿಕ್ ಡಿಸ್ಕ್ ಡ್ರಮ್ ಹೊಂದಿದ ಬ್ರೇಕ್ ಕೂಡ ಇದೆ. ಗೇರ್ ಬಾಕ್ಸ್ ಮತ್ತು ಡಬಲ್ ಚೈನ್ ಒಳಗೊಂಡಿರುವ ಯಂತ್ರದಲ್ಲಿ ಪುಟ್ಟ ಸೀಟ್, ಸೇಫ್ಟ್ ಬೆಲ್ಟ್ ವ್ಯವಸ್ಥೆ ಒಳಗೊಂಡಿದೆ. ಸುಮಾರು 70 ಕೆ.ಜಿ. ತೂಕವುಳ್ಳ ವ್ಯಕ್ತಿ ಇದರಲ್ಲಿ ಸಲೀಸಾಗಿ ಕುಳಿತುಕೊಳ್ಳಬಹುದು. ಎರಡೂ ಕೈಯನ್ನು ಹಿಡಿಯಲು ಹ್ಯಾಂಡಲ್, ಬೈಕ್‍ನ ಹ್ಯಾಂಡ್ ಬ್ರೇಕ್ ಮಾದರಿಯಲ್ಲಿ ರುವ ನಿಯಂತ್ರಣ ವ್ಯವಸ್ಥೆ ಇಲ್ಲಿದೆ. ಈ ಬೈಕ್ ನಂಥ ಯಂತ್ರದಲ್ಲಿ ಕುಳಿತು ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಸ್ವಿಚ್ ಒತ್ತಿದರೆ ಮುಗೀತು. ಸುಯ್ಯೆಂದು 30 ಸೆಕೆಂಡ್‍ಗಳಲ್ಲಿ ನೀವು ಅಡಕೆ ಮರದ ತುದಿಗೆ ಕೆಲಸ ಮುಗಿಸಿ ಕೆಳಗಿಳಿಯಬೇಕಾದರೆ ಇಂಜಿನ್ ಆಫ್ ಮಾಡಿದರೂ ನಡೆಯುತ್ತದೆ. ಬೀಳುವ ಯಾವುದೇ ಅಪಾಯವಿಲ್ಲ. ಮರಕ್ಕೂ ತೊಂದರೆ ಇಲ್ಲ ಎಂದು ಮಾಹಿತಿ ನೀಡುತ್ತಾರೆ ಭಟ್ ಅವರು.

ಟೂ ಸ್ಟ್ರೋಕ್ ಇಂಜಿನ್ ಆಗಿರುವ ಕಾರಣ, ಪೆಟ್ರೋಲ್ ಮತ್ತು ಆಯಿಲ್ ಸೂಚಿತ ಪ್ರಮಾಣದಲ್ಲಿ ಹಾಕಿ ಸುಸ್ಥಿತಿಯಲ್ಲಿ ಯಂತ್ರವನ್ನು ಇಡಬೇಕು. ಬಳಿಕ ತಾವೇರುವ ಅಡಿಕೆ ಮರದ ಬುಡದಲ್ಲಿ ಅದನ್ನು ಸ್ಥಾಪಿಸಬೇಕು. ಇದರ ವಿನ್ಯಾಸ ಹೇಗಿದೆ ಎಂದರೆ ಯಂತ್ರವನ್ನು ಬಿಡಿಸಿ, ಅಡಕೆ ಮರಕ್ಕೆ ತಾಗಿಸಿದರೆ, ಅದನ್ನು ಕಚ್ಚಿಕೊಂಡು ಕುಳಿತುಕೊಳ್ಳುತ್ತದೆ. ಅದಾದ ಬಳಿಕ ನಮ್ಮ ಜಾಗರೂಕತೆಗೆ ಸೇಫ್ಟಿ ಬೆಲ್ಟ್ ಕಟ್ಟಿಕೊಂಡು ಯಂತ್ರದಲ್ಲಿರುವ ಆಸನದಲ್ಲಿ ಕುಳಿತು, ಸ್ವಿಚ್ ಅದುಮಿದರೆ, ಬುರ್ರೆಂದು ಮೇಲಕ್ಕೇರುತ್ತಾ ಹೋಗುತ್ತದೆ. ನಿಮಗೆ ಅರ್ಧ ಜಾಗದಲ್ಲಿಯೇ ನಿಲ್ಲಿಸಬೇಕೆಂದಿದ್ದರೆ, ನಿಲ್ಲಿಸಬಹುದು, ಒಮ್ಮೆ ಕೆಳಕ್ಕೆ ಬಂದು ಮತ್ತೆ ಮೇಲಕ್ಕೆ ಹೋಗಲೂ ಬಹುದು, ಸಾಮಾನ್ಯವಾಗಿ 30 ಸೆಕೆಂಡ್‍ಗಳಲ್ಲಿ ಒಂದು ಅಡಕೆ ಮರವನ್ನು ಹತ್ತಬಹುದು. ತಮ್ಮ ಕೆಲಸವನ್ನು ಮುಗಿಸಿದ ಬಳಿಕ ಯಂತ್ರದ ಬ್ರೇಕ್ ಸಹಾಯದಿಂದ ಹಾಗೆಯೇ ಕೆಳಕ್ಕಿಳಿಯಬಹುದು. ಈ ಸಂದರ್ಭ ಇಂಜಿನ್ ಆಫ್ ಆಗಿದ್ದರೂ ಪರವಾಗಿಲ್ಲ ಎನ್ನುತ್ತಾರೆ ಗಣಪತಿ ಭಟ್. ಡಬಲ್ ಬ್ರೇಕ್, ಸೇಫ್ಟ್ ಬೆಲ್ಟ್ ಇದ್ದರೆ ಮನುಷ್ಯ ಯಾವುದೆಲ್ಲ ಮರವನ್ನು ಹತ್ತುತ್ತಾನೋ ಅಲ್ಲೆಲ್ಲ ಯಂತ್ರ ಕೆಲಸ ಮಾಡುತ್ತದೆ ಎನ್ನುತ್ತಾರೆ ಅವರು.

ಗಣಪತಿ ಭಟ್ ಮಗಳು ಪದವಿ ವ್ಯಾಸಂಗ ಮಾಡುತ್ತಿರುವ ಸುಪ್ರಿಯಾ ಮರವೇರುವ ಯಂತ್ರದಲ್ಲಿ ಕುಳಿತು ಸ್ವಿಚ್ ಅದುಮಿ ಮೇಲಕ್ಕೇರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೃಷಿ ನಡೆಸುವವರು ಸ್ವತಃ ದುಡಿಯುವುದಿದ್ದರೆ ಯಾರ ಸಹಾಯವೂ ಇಲ್ಲದೆ ತಾವೇ ಮರವೇರಬಹುದು. ಮಹಿಳೆಯರು, ಮಕ್ಕಳಿಗೂ ಇದು ಸೇಫ್ ಎನ್ನುವುದು ಪ್ರಾಯೋಗಿಕವಾಗಿ ಸಾಬೀತಾಗಿದೆ.

ತನ್ನ ಸ್ವಂತ ಉಪಯೋಗಕ್ಕಾಗಿ ಮಾಡಿದ ಈ ಪ್ರಯೋಗದ ವಿಡಿಯೋ ವ್ಯಾಪಕವಾಗಿ ಪ್ರಚಾರಗೊಂಡ ಕಾರಣ ಭಟ್ ಅವರಿಗೆ ದೂರವಾಣಿ ಕರೆಗಳ ಸುರಿಮಳೆಯೇ ಬರುತ್ತಿದೆ. ಅದನ್ನು ನೋಡಲು ದೂರದೂರುಗಳಿಂದ ಕೃಷಿಕರು ಬರುತ್ತಿದ್ದಾರೆ. ಜೊತೆಗೆ ತನಗೊಂದು ಯಂತ್ರ ನಿರ್ಮಿಸಿಕೊಡಿ ಎಂಬ ಬೇಡಿಕೆಯೂ ಬರುತ್ತಿದೆ. ಯಂತ್ರ ನಿರ್ಮಿಸಲು ಎಪ್ಪತ್ತೈದು ಸಾವಿರ ರೂ. ಬೇಕು, ಬೇಡಿಕೆ ಇಟ್ಟವರಿಗೆ ಮಾಡಿ ಕೊಡುತ್ತೇನೆ ಎಂದು  ಗಣಪತಿ ಭಟ್ ಹೇಳುತ್ತಾರೆ .

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English