ಹೆಚ್ಚುವರಿ ಆಟೋ ತಂಗುದಾಣಕ್ಕೆ ರಿಕ್ಷಾ ಬಂದ್‌, ಮಹಾನಗರಪಾಲಿಕೆ ಕಚೇರಿ ಚಲೋ

4:43 PM, Saturday, May 26th, 2012
Share
1 Star2 Stars3 Stars4 Stars5 Stars
(4 rating, 4 votes)
Loading...

Auto Strick

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಆಟೋ ರಿಕ್ಷಾ ಚಾಲಕರ ಸಂಘ, ಜಿಲ್ಲಾ ಆಟೋ ರಿಕ್ಷಾ ಚಾಲಕರ ಅಶೋಸಿಯೇಷನ್, ರಾಜ್ಯ ಆಟೋ ರಿಕ್ಷಾ ಚಾಲಕರ ಫೆಡರೇಷನ್, ಮೈನ್ಯಾರಿಟೀಸ್ ಆಟೋ ಡ್ರೈವರ್ಸ್ ಆಶೋಶಿಯೇಶನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಆಶ್ರಯದಲ್ಲಿ ಶುಕ್ರವಾರ ನಗರದಲ್ಲಿ ರಿಕ್ಷಾ ನಿಲುಗಡೆಗೆ ಸುಸಜ್ಜಿತ ತಂಗುದಾಣಗಳ ವ್ಯವಸ್ಥೆ ಕಲ್ಪಿಸ ಬೇಕು ಎಂದು ಆಗ್ರಹಿಸಿ ಮಂಗಳೂರು ಮಹಾನಗರ ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಐವನ್‌ ಡಿ’ಸೋಜಾ ನೇತೃತ್ವದಲ್ಲಿ ರಿಕ್ಷಾ ಬಂದ್‌ ಮತ್ತು ಮಹಾನಗರಪಾಲಿಕೆ ಕಚೇರಿ ಚಲೋ ಕಾರ್ಯಕ್ರಮ ನಡೆಯಿತು.

ವಿಧಾನ ಸಭೆಯ ಪ್ರತಿಪಕ್ಷ ಸಚೇತಕ ಅಭಯಚಂದ್ರ ಜೈನ್‌ ಮತ್ತು ಐವನ್‌ ಡಿ’ಸೋಜಾ ಅವರು ಡೋಲು ಬಾರಿಸುವ ಮೂಲಕ ಮಹಾನಗರಪಾಲಿಕೆ ಕಚೇರಿ ಚಲೋ ಮೆರವಣಿಗೆಯನ್ನು ಉದ್ಘಾಟಿಸಿದರು. ಉರ್ವಸ್ಟೋರ್‌ ಮೈದಾನಿನಲ್ಲಿ ಒಟ್ಟು ಸೇರಿದ ರಿಕ್ಷಾ ಚಾಲಕರು ಅಲ್ಲಿಂದ ಮೆರವಣಿಗೆಯಲ್ಲಿ ತೆರಳಿದರು. ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಅಶ್ರಫ್‌, ಪಾಲಿಕೆ ಸದಸ್ಯ ನಾಗೇಂದ್ರ ಕುಮಾರ್‌, ಮಿಥುನ್‌ ರೈ, ಪ್ರವೀಣ್‌ಚಂದ್ರ ಆಳ್ವ, ಬಿ.ಎ. ಮೊದಿನ್‌ ಬಾವಾ, ರಿಕ್ಷಾ ಚಾಲಕ/ ಮಾಲಕರ ಸಂಘಟನೆಗಳ ಪ್ರತಿನಿಧಿಗಳಾದ ವಿಷ್ಣು ಮೂರ್ತಿ, ಅಲಿ ಹಸನ್‌, ಅಶೋಕ್‌ ಕುಮಾರ್‌ ಶೆಟ್ಟಿ, ಅಬೂಬಕರ್‌, ರಾಧಾಕೃಷ್ಣ ಉರ್ವ, ಪ್ರಕಾಶ್‌, ಶೇಖರ ದೇರಳಕಟ್ಟೆ ಮುಂತಾದವರು ಉಪಸ್ಥಿತರಿದ್ದರು.

Auto Strick

ಮೆರವಣಿಗೆಯು ಲಾಲ್‌ಬಾಗ್‌ ತಲುಪಿದಾಗ ಅಲ್ಲಿ ಮಹಾ ನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು. ಸಂಘದ ಅಧ್ಯಕ್ಷ ಐವನ್‌ ಡಿ’ಸೋಜಾ ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿ ನಗರದಲ್ಲಿ ಕೇವಲ 75 ಆಟೋ ರಿಕ್ಷಾ ತಂಗುದಾಣಗಳಿದ್ದು 5600 ಆಟೋ ಗಳಿವೆ. ಪಾಲಿಕೆಯು ಕನಿಷ್ಟ 300 ಆಟೋ ತಂಗುದಾಣಗಳನ್ನಾದರೂ ನಿರ್ಮಿಸ ಬೇಕು ಎಂದು ಒತ್ತಾಯಿಸಿದರು.

Auto Strick

ಸಿಐಟಿಯು ಮುಖಂಡ ಎಲ್.ಟಿ ಸುವರ್ಣ ಮಾತನಾಡಿ ಪಾಲಿಕೆಯು ಕುಡಿಯುವ ನೀರು, ಶೌಚಾಲಯಗಳಿರುವ ಸುಸಜ್ಜಿತ ಆಟೋ ನಿಲ್ದಾಣಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು. ಪಾಲಿಕೆಯ ಆಯುಕ್ತರು ಈ ಹಿಂದೆ ನೀಡಿದ ಭರವಸೆಗಳನ್ನು ಇನ್ನು ಪೂರೈಸಿಲ್ಲ ಎಂದು ನೆನಪಿಸಿದರು.

ಈ ಸಂದರ್ಭ ಪಾಲಿಕೆಯ ಜಂಟಿ ಅಯುಕ್ತರಿಗೆ ಮನವಿ ಸಲ್ಲಿಸಲಾಯಿತು. 241 ರಿಕ್ಷಾ ತಂಗುದಾಣಗಳ ಪಟ್ಟಿ ಸಿದ್ಧವಾಗಿದ್ದು, ಒಂದು ತಿಂಗಳಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ಜಂಟಿ ಆಯುಕ್ತ ಶ್ರೀಕಾಂತ ರಾವ್‌ ತಿಳಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ದಯಾನಂದ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಐವನ್‌ ಡಿ’ಸೋಜಾ, ಎಲ್‌.ಟಿ. ಸುವರ್ಣ ಮುಂತಾದವರು ಮಾತನಾಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English